ಬೆಂಗಳೂರು: ಹಿಂದೂ ದೇವಸ್ಥಾನ ಉಳಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸಬೇಕು. ದೇವಾಲಯ ಒಡೆಯದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಒಗ್ಗಟ್ಟು ಪ್ರದರ್ಶಿಸಬೇಕೆಂದು ಬಿಬಿಎಂಪಿ ಸದಸ್ಯೆ ನಾಗರತ್ನ ರಾಮಮೂರ್ತಿ ಪ್ರತಿಭಟನೆ ವೇಳೆ ಕರೆ ನೀಡಿದರು.
ಜಯನಗರ ನಾಲ್ಕನೇ ಬಡಾವಣೆಯಲ್ಲಿರುವ ಮುನೇಶ್ವರ ದೇವಾಲಯದ ತೆರವಿಗೆ ವಿರೋಧಿಸಿ ಜಯನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ನಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಲಯ ದೇವಸ್ಥಾನವನ್ನು ತೆರವು ಮಾಡಬೇಕೆಂದು ಆದೇಶಿಸದಿದ್ದರೂ ಬಿಬಿಎಂಪಿ ದೇವಾಲಯವನ್ನು ಒಡೆದು ಹಾಕಲು ಮುಂದಾಗಿದೆ. ಜಯನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರ್ಟ್ ಆದೇಶವನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ದೇವಾಲಯ ಒಡೆಯಬಾರದು ಎಂದು ಪಾಲಿಕೆ ಆಯುಕ್ತರಿಗೂ ಪತ್ರ ಬರೆಯಲಾಗಿದೆ. ಫುಟ್ ಪಾತ್ ಒತ್ತುವಾರಿಯಾಗಿದೆ ಎಂದು ಸನಾತನ ಕಲಾ ಕ್ಷೇತ್ರದ ರಂಗನಾಥ್ ಎಂಬ ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದರು. ಪಾಲಿಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಕೋರ್ಟ್ ವರದಿ ಕೇಳಿದೆ. ಆದ್ರೆ ತೆರವು ಮಾಡಲು ಕೋರ್ಟ್ ಆದೇಶ ನೀಡಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ದೇವಾಲಯ ಒಡೆಯಲು ಬಿಡೋದಿಲ್ಲ ಎಂದು ಮುನೇಶ್ವರ ಗುಡಿಯ ಎದುರು ಕುಳಿತು ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು. ಇವರಿಗೆ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಸಾಥ್ ನೀಡಿದ್ದಾರೆ.