ಬೆಂಗಳೂರು : ಈದ್ಗಾ ಮೈದಾನದ ಸಂಬಂಧ ಶಾಸಕ ಜಮೀರ್ ಅಹ್ಮದ್ ಸಭೆ ಮುಗಿದ ಬೆನ್ನಲ್ಲೆ ಚಾಮರಾಜಪೇಟೆ ನಾಗರಿಕ ವೇದಿಕೆಯ ಮತ್ತೊಂದು ಬಣ ಬಂದ್ಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಚಾಮರಾಜಪೇಟೆಯ ನಾಗರಿಕರ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಉಪಮೇಯರ್ ರಾಮೇಗೌಡ ಮಾತನಾಡಿ ಜುಲೈ 12ರ ಬಂದ್ಗೆ ಬೆಂಬಲ ಸೂಚಿಸುವಂತೆ ಚಾಮರಾಜಪೇಟೆ ಅಂಗಡಿ ಮುಂಗಟ್ಟುಗಳಿಗೆ ಕರಪತ್ರ ಹಂಚಿದ್ದೇವೆಂದು ಹೇಳಿದ್ದಾರೆ.
ಜಮೀರ್ ಅಹ್ಮದ್ ಚಾಮರಾಜಪೇಟೆ ಜನರಿಗೆ ಮಂಕುಬೂದಿ ಎರಚುವುದು ಬೇಡ. ಅದು ಆಟದ ಮೈದಾನ ಆಗಿತ್ತು, ಆಟದ ಮೈದಾನ ಆಗಿರುತ್ತದೆ ಅನ್ನೋದಲ್ಲ, ಆ ಮೈದಾನ ಸಂಪೂರ್ಣವಾಗಿ ಬಿಬಿಎಂಪಿಗೆ ಸೇರಿದ್ದು. ಪಾಲಿಕೆ ಸುಪರ್ದಿಗೆ ಬರಬೇಕು ಎಲ್ಲರಿಗೂ ಸಮಾನ ಹಕ್ಕು ದೊರೆಯಬೇಕು ಎನ್ನುವುದು ನಮ್ಮ ಹೋರಾಟದ ಗುರಿ ಎಂದು ತಿಳಿಸಿದ್ದಾರೆ.
ಬೈಕ್ ಮೆರವಣಿಗೆಯ ಮೂಲಕ ಮನವಿ: ಎಸಿಪಿ ನಮ್ಮನ್ನೆಲ್ಲ ಕರೆದು ಮಾತನಾಡಿದ್ದಾರೆ. ನಾವು ಶಾಂತಿಯುತವಾಗಿ ಬಂದ್ ಮಾಡುತ್ತೇವೆ ಎಂದು ಹೇಳಿದ್ದೇವೆ. ಯಾವುದೇ ಸರ್ಕಾರ ಆದರೂ ಪೊಲೀಸರು ಬಂದ್ ಮಾಡಿ ಸಪೋರ್ಟ್ ಮಾಡುತ್ತೇವೆ ಎಂದು ಹೇಳುವುದಿಲ್ಲ. ನಮ್ಮದು ಕೇವಲ ಸ್ವಯಂ ಪ್ರೇರಿತ ಬಂದ್ ಅಷ್ಟೆ. ಈಗಾಗಲೇ ಕರ ಪತ್ರಗಳನ್ನು ಹಂಚಿದ್ದೇವೆ, ಶಾಂತಿಯುತವಾಗಿ ಬಂದ್ ಮಾಡುತ್ತೇವೆ ಎಂದರು.
15 ನೇ ತಾರೀಖು ನಾವು ಬೈಕ್ ಜಾಥಾ ಹಮ್ಮಿಕೊಂಡಿದ್ದೇವೆ. ಸುಮಾರು 200 ಬೈಕ್ಗಳಲ್ಲಿ ಮೆರವಣಿಗೆಯ ಮೂಲಕ ಬಿಬಿಎಂಪಿ ಕಚೇರಿಗೆ ತೆರಳಲಿದ್ದೇವೆ. ಅಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಈದ್ಗಾ ಮೈದಾನವನ್ನು ಬಿಬಿಎಂಪಿ ಆಸ್ತಿಯಾಗಿ ಉಳಿಸುವಂತೆ ಮನವಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಪ್ರಾಣ ಇರುವವರೆಗೂ ಈದ್ಗಾ ಮೈದಾನ ಏನೂ ಆಗಲು ಬಿಡುವುದಿಲ್ಲ: ಜಮೀರ್ ಅಹಮದ್ ಖಾನ್