ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದು ಆಗಸ್ಟ್ 2ರಿಂದ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಪ್ರಾರಂಭಿಸಲು ಆದೇಶದ ಅನುಮತಿ ನೀಡಬೇಕೆಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿ, ರುಪ್ಸಾ ಕರ್ನಾಟಲ ಸದಾ ತಮ್ಮೊಂದಿಗಿದೆ ಎಂದು ಬೆಂಬಲ ಸೂಚಿಸಿದ್ದಾರೆ. ಅಲ್ಲದೇ 6 ಅಂಶಗಳ ಮನವಿಗಳನ್ನು ಸಲ್ಲಿಸಿದ್ದಾರೆ.
ಮನವಿಯಲ್ಲಿರುವ ಅಂಶಗಳಿವು..
1. ರಾಜ್ಯದಲ್ಲಿ ಜೂನ್ ಮೊದಲ ವಾರದಲ್ಲಿಯೇ ಕೊರೊನಾ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಯಾಗಿದೆ.
2. ದೇಶ-ವಿದೇಶದ ತಜ್ಞರು ಮೂರನೇ ಅಲೆಯ ಸಾಧ್ಯತೆ ಕಡಿಮೆ. ಮಕ್ಕಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.
3. ಡಾ.ದೇವಿ ಶೆಟ್ಟಿ ಅವರ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯು ಭೌತಿಕ ತರಗತಿಗಳನ್ನು ಪ್ರಾಥಮಿಕ ಹಂತದಿಂದಲೇ ಪ್ರಾರಂಭಿಸಲೇಬೇಕು ಎಂದು ವರದಿ ನೀಡಿದೆ.
4. ಲಾನ್ಸೆಟ್ ಎಂಬ ಯುರೋಪಿನ ವೈದ್ಯಕೀಯ ಸಂಸ್ಥೆ ದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಮಕ್ಕಳು ರೋಗ ಪ್ರಸರಣಾ ಮಾಧ್ಯಮ ಆಗುವುದಿಲ್ಲ. ಶಾಲೆಗಳನ್ನು ನಡೆಸುವುದರಿಂದ ಯಾವುದೇ ತೊಂದರೆ ಇಲ್ಲ ಎಂದಿದೆ.
5. ಐಸಿಎಮ್ಆರ್ ಸಹ ಶಾಲೆಗಳು ಪ್ರಾರಂಭವಾಗುವುದರಿಂದ ಸಾಂಕ್ರಾಮಿಕ ರೋಗ ಹರಡುವುದಿಲ್ಲ ಹಾಗು ಪ್ರಾಥಮಿಕ ಶಾಲೆಗಳು ಪ್ರಾರಂಭವಾಗಬೇಕು ಎಂದು ವರದಿ ನೀಡಿದೆ.
6.ಬೆಂಗಳೂರಿನ ನಿಮಾನ್ಸ್ ನ ಖ್ಯಾತ ವೈದ್ಯಕೀಯ ತಂಡ ತನ್ನ ಸಮೀಕ್ಷಾ ವರದಿಯಲ್ಲಿ ಶಾಲೆಗಳು ಭೌತಿಕ ತರಗತಿಗಳನ್ನು ಪ್ರಾರಂಭಿಸುವುದರಿಂದ ತೊಂದರೆ ಇಲ್ಲವೆಂದು ಅಭಿಪ್ರಾಯಪಟ್ಟಿದೆ.
ಹೀಗಾಗಿ ರಾಜ್ಯದ ಮಕ್ಕಳು ಕಲಿಕೆಯಿಂದ ದೂರ ಉಳಿದು 16 ತಿಂಗಳಾಯಿತು. ವೈದ್ಯಕೀಯ ಸಂಶೋಧಕರ ವರದಿಗಳನ್ನು ಆಧಾರವಾಗಿಟ್ಟುಕೊಂಡು, ಆ. 2ರಿಂದ ಪ್ರಾಥಮಿಕ ಹಂತದಿಂದಲೇ ಭೌತಿಕ ತರಗತಿಗಳನ್ನು ನಡೆಸಲು ಅಧಿಕಾರಿಗಳಿಗೆ ಆದೇಶಿಸಬೇಕೆಂದು ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಭೌತಿಕ ತರಗತಿ ಪ್ರಾರಂಭಿಸುವಂತೆ ಶಿಕ್ಷಣ ಸಚಿವರಿಗೆ ರುಪ್ಸಾ ಮನವಿ: ಕಾರಣಗಳು ಇಂತಿವೆ..!