ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ನಡೆಯುವ ವಿಶೇಷ ಜಾತ್ರೆ/ಉತ್ಸವದ ಸಮಯದಲ್ಲಿ ಹುಂಡಿಗಳ ನಿರ್ವಹಣೆಯನ್ನು ಖಾಸಗಿಯವರು ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ನಡೆಯಲಿರುವ ಜಾತ್ರೆ, ರಥೋತ್ಸವ, ಉತ್ಸವ ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳಂದು ಖಾಸಗಿ ವ್ಯಕ್ತಿಗಳು ಹುಂಡಿಗಳನ್ನು ಇಟ್ಟು ಅದರಿಂದ ಸಂಗ್ರಹವಾಗುವ ಹಣವನ್ನು ನಿರ್ವಹಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 69 (ಬಿ ) ಪ್ರಕಾರ ಈ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಯಾವೊಬ್ಬ ವ್ಯಕ್ತಿ, ಸಂಸ್ಥೆ, ಸೇವಾ ಸಮಿತಿ ಅಥವಾ ಅಭಿವೃದ್ಧಿ ಸಂಸ್ಥೆ ನೋಂದಾಯಿತವಾಗಿರಲಿ, ನೋಂದಾಯಿತವಾಗಿಲ್ಲದಿರಲಿ, ನಿಯಮಿಸಲಾದ ಪ್ರಾಧಿಕಾರದಿಂದ ಅದು ಮಂಜೂರಾತಿ ಪಡೆದ ಹೊರತು ಅಧಿಸೂಚಿತ ಸಂಸ್ಥೆಯ ಅಥವಾ ಘೋಷಿತ ಸಂಸ್ಥೆಯ ಹೆಸರಿನಲ್ಲಿ ಯಾವುದೇ ಉದ್ದೇಶಕ್ಕಾಗಿ ಸೇವಾ ನಿಧಿಯನ್ನು ಅಥವಾ ದೇಣಿಗೆಯನ್ನು ಸಂಗ್ರಹಿಸಲು ಹಕ್ಕನ್ನು ಹೊಂದಿರತಕ್ಕದ್ದಲ್ಲ.
ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ಇನ್ನು ಮುಂದೆ ಮತ್ತು ಈಗಾಗಲೇ ಅಳವಡಿಸಿರುವ ಹುಂಡಿಗಳೊಂದಿಗೆ ಜಾತ್ರೆ, ರಥೋತ್ಸವ, ಉತ್ಸವ ಹಾಗೂ ವಿಶೇಷ ಕಾರ್ಯಕ್ರಮಗಳಂದು ಖಾಸಗಿ ವ್ಯಕ್ತಿಗಳು ಹುಂಡಿಗಳಿಂದ ಹಾಗೂ ಇತರೆ ಯಾವುದೇ ನಿಯಮದ ಅಡಿಯಲ್ಲಿ ಹಣವನ್ನು ಸಂಗ್ರಹಿಸಲು ಕಡ್ಡಾಯವಾಗಿ ಅವಕಾಶ ನೀಡತಕ್ಕದ್ದಲ್ಲ.
ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಂಬಂಧಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯವರು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದೆ.
ಈಗಾಗಲೇ ಹೊರಡಿಸಲಾಗಿರುವ ಸುತ್ತೋಲೆಗಳನ್ವಯ, ಹುಂಡಿ ಹಣವನ್ನು ದೇವಾಲಯದ ಖಾತೆಗೆ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿಯವರಿಗೆ ಸೂಚಿಸಿದೆ.