ಬೆಂಗಳೂರು : ನಗರದ ಕಾಚರಕನಹಳ್ಳಿಯ ಕೆರೆ ಪ್ರದೇಶದಲ್ಲಿ ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿಯವರಿಂದ ಆಗಿರುವ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸುವ ಬಗ್ಗೆ ಮುಂದಿನ 3 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.ಕಾಚರಕನಹಳ್ಳಿಯ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ವಲಸೆ ಕಾಮಿರ್ಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ವಕೀಲೆ ವೈಶಾಲಿ ಹೆಗಡೆ ಬರೆದ ಪತ್ರ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಸಲ್ಲಿಸಿದ ಸರ್ವೆ ವರದಿ ಪರಿಶೀಲಿಸಿದ ಪೀಠ, ಕೆರೆ ಪ್ರದೇಶದ 13.30 ಎಕರೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದು, 23.6 ಎಕರೆ ಸರ್ಕಾರದ ಪ್ರಾಧಿಕಾರಗಳಿಂದಲೇ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೇ ಗರಿಷ್ಠ 15.26 ಎಕರೆ ಒತ್ತುವರಿಯಾಗಿದ್ದು, 7.30 ಎಕರೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಆದ್ದರಿಂದ, ಈ ಎಲ್ಲಾ ಒತ್ತುವರಿಗಳನ್ನು ಹೇಗೆ ತೆರವುಗೊಳಿಸುತ್ತೀರಿ ಎಂಬ ಬಗ್ಗೆ 3 ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು.
ಇದನ್ನೂ ಓದಿ: ಪಶು ಸಹಾಯವಾಣಿ ಉದ್ಘಾಟಿಸಿದ ಸಿಎಂ ಬಿಎಸ್ವೈ: ಇಲ್ಲಿವೆ ವಿಶೇಷತೆ
ಪ್ರಕರಣದ ಹಿನ್ನೆಲೆ
ಕಾರ್ಮಿಕರ ಗುಡಿಸಲುಗಳನ್ನು ದುಷ್ಕರ್ಮಿಗಳು ಸುಟ್ಟುಹಾಕಿದ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಸೂರು ನಿರ್ಮಿಸಿಕೊಡುವಂತೆ ಹೈಕೋರ್ಟ್ ನಿರ್ದೇಶಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸರ್ಕಾರ ಅದು ಕೆರೆ ಜಾಗ ಎಂದು ಹೇಳಿತ್ತು. ಕೆರೆ ಜಾಗ ಎಂಬುದು ತಿಳಿದು ಬಂದ ನಂತರ ಆ ಕುರಿತು ವರದಿ ಕೇಳಿತ್ತು. ನಂತರದ ವಿಚಾರಣೆಗಳ ವೇಳೆ ಕೆರೆ ಪ್ರದೇಶ ಒತ್ತುವರಿ ವಿಚಾರ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆರೆ ಜಾಗದ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ಇದೀಗ ನಗರದ ಮಧ್ಯಭಾಗದಲ್ಲಿರುವ ನೂರಾರು ಕೋಟಿ ರೂಪಾಯಿ ಮೌಲ್ಯದ ಕೆರೆ ಜಾಗವನ್ನು ಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಖಾಸಗಿಯವರು ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ.