ಬೆಂಗಳೂರು: ಹತ್ತು ದಿನಗಳ ಹಿಂದೆ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಉಸಿರಾಟದ ತೊಂದರೆಯಿಂದ ನಗರದಲ್ಲಿ ಸಾವನ್ನಪ್ಪಿದ್ದಾರೆ.
ಸುಂಕದಕಟ್ಟೆ ನಿವಾಸಿಯಾದ 10 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಅವರಿಗೆ ಅವಳಿ-ಜವಳಿ ಮಕ್ಕಳಾಗಿದ್ದವು. ಈ ವೇಳೆ ಬಾಣಂತಿ ಹಾಗೂ ಮಕ್ಕಳು ಆರೋಗ್ಯವಾಗಿರುವುದಾಗಿ ಹೇಳಿ ಆಸ್ಪತ್ರೆಯವರು ಡಿಸ್ಚಾರ್ಜ್ ಮಾಡಿದ್ದರು ಎನ್ನಲಾಗ್ತಿದೆ.
ಆಸ್ಪತ್ರೆಯಿಂದ ಬಂದ ಬಳಿಕ ಮಹಿಳೆಗೆ ದಿಢೀರ್ ಉಸಿರಾಟ ಸಮಸ್ಯೆ ಎದುರಾಗಿತ್ತು. ನಿನ್ನೆ ನಾಲ್ಕೈದು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಬೆಡ್ಗಳ ಕೊರತೆ ನೆಪದಲ್ಲಿ ಆಕೆಗೆ ಚಿಕಿತ್ಸೆ ಸಿಕ್ಕಿರಲಿಲ್ಲ ಎಂದು ಆರೋಪಿಲಾಗಿದೆ.
ಕೊನೆಗೆ ಗಂಭೀರ ಸ್ಥಿತಿಯಲ್ಲಿದ್ದ ಬಾಣಂತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಬಾಣಂತಿ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿಗೆ ಬಾಣಂತಿ ತುತ್ತಾಗಿರುವ ಶಂಕೆ ಇದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದರ ಜೊತೆಗೆ ಚಿಕಿತ್ಸೆಗೆ ನಿರಾಕರಿಸಿದ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗಿದ್ದಾರೆ.