ಬೆಂಗಳೂರು: ರಾಜಕಾರಣಿಗಳು ಭಾಷಣ ಮಾಡಬಹುದು, ಘೋಷಣೆ ಕೂಗಬಹುದು, ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು. ಆದ್ರೆ ಯಾವ ವ್ಯಕ್ತಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಂಡು ಇತರರ ಏಳಿಗೆಗೆ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಯಲಹಂಕ ಬಳಿಯ ನವರತ್ನ ಅಗ್ರಹಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರಸ್ತಾಪಿತ ಪ್ರೌಢ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಆಚಾರ, ವಿಚಾರ, ಸಂಸ್ಕೃತಿ ಪರಂಪರೆಗಳಲ್ಲಿ ಭವಿಷ್ಯವನ್ನು ಕಟ್ಟಬೇಕು ಎಂಬ ಭಾವನೆಯಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಪ್ರಾಣಾರ್ಪಣೆ ಮಾಡಿದ್ದರು. ಆದರೆ ನಮ್ಮ ಹಿರಿಯರ ಮನಸ್ಸಿನ ಕಲ್ಪನೆಯ ಭಾರತ ರೂಪಗೊಂಡಿಲ್ಲ. ಭವಿಷ್ಯವನ್ನು ತಾನೇ ನಿರೂಪಿಸಿಕೊಂಡು ಇತರರ ಏಳಿಗೆಗಾಗಿ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಜನರಿಗೆ ನಾನು ಮತ್ತು ನನ್ನ ಕುಟುಂಬ ಚೆನ್ನಾಗಿ ಇರಬೇಕೆಂಬ ಸೀಮಿತ ಭಾವನೆ ಇದೆ. ಅದನ್ನು ಮೀರಿ ನಡೆದಾಗ ಮಾತ್ರ ದೇಶದ ನಿರ್ಮಾಣ ಸಾಧ್ಯವಾಗುತ್ತದೆ. ಸರ್ಕಾರದಿಂದ ಯಾವುದೇ ಸಮಾಜ, ರಾಜ್ಯ, ರಾಷ್ಟ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಮನುಷ್ಯ ತಾನು ಬೆಳೆಯುವುದರ ಜೊತೆಗೆ ಭವಿಷ್ಯದಲ್ಲಿ ಇತರರಿಗೂ ಸಹಾಯ ಮಾಡುವಂತಹ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಶ್ರದ್ಧೆ ಹಣಕ್ಕಿಂತ ಉತ್ತಮ. ಹಣ ಇದ್ದವರೆಲ್ಲರಿಗೂ ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ತಮ್ಮ ಸ್ವಂತ ದುಡಿಮೆಯ 3 ಕೋಟಿ ರೂ.ಗಳನ್ನು ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟ ರೊನಾಲ್ಡ್ ಕೊಲಾಸೊ ಅವರಲ್ಲಿ ಹೃದಯ ಶ್ರೀಮಂತಿಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.