ಬೆಂಗಳೂರು: ಸಂಸದ ಡಿ.ಕೆ.ಸುರೇಶ್ಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದು ಕಾನೂನು ಕೆಲಸ. ಅಧಿಕಾರಿಗಳು ತಮ್ಮ ಕೆಲಸ ಮಾಡ್ತಾರೆ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹಾಗಾಗಿ ಇದಕ್ಕೆ ಹೆಚ್ಚು ಮಹತ್ವ ಕೊಡುವ ಕೆಲಸ ಆಗಬಾರದು. ಕಾನೂನಾತ್ಮಕ ವಿಚಾರವನ್ನು ರಾಜಕೀಯಗೊಳಿಸುವ ಕೆಲಸ ಆಗಬಾರದು. ಇದರಿಂದ ಕಾನೂನು ಅನುಷ್ಠಾನಕ್ಕೆ ಅಡ್ಡಿ ಮಾಡಿದಂತಾಗುತ್ತದೆ. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಇದಕ್ಕೆ ರಾಜಕೀಯ ಬಣ್ಣ ಕೊಡುವ ಕೆಲಸ ಆಗಬಾರದು. ಯಾರೇ ಭ್ರಷ್ಟಾಚಾರ ಮಾಡಿದ್ದರೂ ಕಾನೂನಿನಡಿ ಬರಬೇಕು. ಬೇನಾಮಿ ಆಸ್ತಿಗಳೆಲ್ಲಾ ಹೋಗಬೇಕು ಎಂದರು.
ಬಿಜೆಪಿ ವಿರುದ್ಧ ಜೆಡಿಎಸ್-ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಕಾಂಗ್ರೆಸ್ -ಜೆಡಿಎಸ್ನವರಿಗೆ ಆಪಾದನೆ ಮಾಡುವುದು ಸುಲಭ. ಅವರವರ ರಕ್ಷಣೆಗೆ ಇಂತಹ ಪಿತೂರಿ ಮಾಡ್ತಾರೆ. ಪ್ರತಿಯೊಬ್ಬ ಕೂಡಾ ಕಾನೂನು ಪಾಲನೆ ಮಾಡಬೇಕು. ಜನರ ರಕ್ತ ಹೀರಿ ನಾವು ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡುವ ಕೆಲಸ ಆಗಬಾರದು. ನಾಯಕತ್ವಕ್ಕೆ ಗೌರವ ತರುವ ರೀತಿ ನಾಯಕ ನಡೆದುಕೊಳ್ಳಬೇಕು. ಆಗ ಮಾತ್ರ ನಾಯಕ ಹುದ್ದೆಗೆ ಗೌರವ ಬರುತ್ತದೆ ಎಂದರು.
ಸಿಎಂ ಬಂದ ನಂತರ ಮೇಯರ್ ಚುನಾವಣೆ ಸಂಬಂಧ ಸಭೆ
ಬಿಬಿಎಂಪಿ ಮೇಯರ್ ಚುನಾವಣೆ ಆದಷ್ಟು ಬೇಗ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಎಲ್ಲರೂ ಇದನ್ನೇ ಹೇಳ್ತಿರೋದು. ಆದರೆ ಎಲ್ಲೋ ಒಂದು ಕಡೆ ನ್ಯಾಯಾಲಯ ಎರಡು ರೀತಿ ತೀರ್ಪು ನೀಡಿದ್ದು ತೊಡಕಾಗಿದೆ. ಮೇಯರ್ ಹಾಗೂ ಸ್ಥಾಯಿ ಸಮಿತಿ ಎರಡೂ ಚುನಾವಣೆ ಒಟ್ಟಿಗೆ ನಡೆಯಬೇಕು ಎಂಬುದು ನಮ್ಮ ಅಭಿಪ್ರಾಯ ಕೂಡ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ. ಅವರು ಬೆಂಗಳೂರು ಬಂದ ನಂತರ ಸಭೆ ನಡೆಸಿ ಚರ್ಚೆ ಮಾಡ್ತಾರೆ ಎಂದರು.