ಬೆಂಗಳೂರು: ಇಲ್ಲಿನ ಜೆ.ಪಿ ನಗರದ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ವೇಳೆ ದಿಢೀರ್ ದಾಳಿ ನಡೆಸಿರುವ ಕೋಣನಕುಂಟೆ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ನಗರದ ವಿವಿಧ ಏರಿಯಾಗಳಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಚಿನ್ನ ಕಳವು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಐವರು ಕುಖ್ಯಾತ ಕಳ್ಳರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ನಗರ ಪೊಲೀಸ್ ದಕ್ಷಿಣ ವಿಭಾಗದ ಕೋಣನಕುಂಟೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಪಿ.ನಗರ 8ನೇ ಹಂತದ ಕಂಬತ್ತಹಳ್ಳಿ ಮುಖ್ಯರಸ್ತೆ ಬಳಿಯ ಖಾಲಿ ಜಾಗದಲ್ಲಿ 6 ರಿಂದ 7 ಜನ ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಮುಂದಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಅರುಣ್‌ಕುಮಾರ್ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ, ಆರೋಪಿಗಳಾದ ಉಲ್ಲಾಸ್ (19), ರಘು ನಾಯಕ್(19), ಸಲೀಂ (21), ಸಾಗರ್ (19), ನಂದನ (18), ಸುಮಂತ್ (20) ಎನ್ನುವವರನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕದ್ದ ಬೈಕ್ ಗಳಲ್ಲಿ ಆರೋಪಿಗಳ ತಿರುಗಾಟ: ಆರೋಪಿಗಳು ದುಬಾರಿ ಬೈಕ್ ಗಳನ್ನು ಕಳವು ಮಾಡಿ ಅದೇ ಬೈಕ್‌ಗಳಲ್ಲಿ ಹಗಲಿನ ವೇಳೆ ನಗರದ ಹೊರವಲಯಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಹೊಂಚುಹಾಕಿ, ಮನೆಯ ಬಾಗಿಲನ್ನು ಒಡೆದು ದರೋಡೆ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.
ತನಿಖೆಯಿಂದ ಹತ್ತು ಹಲವು ಪ್ರಕರಣಗಳು ಪತ್ತೆ: ಆರೋಪಿಗಳು ನಗರದ ಹಲವು ಕಡೆಗಳಲ್ಲಿ ಇದೇ ಮಾದರಿಯಲ್ಲಿ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿರುವುದು ಹೆಚ್ಚಿನ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ 3 ಚಿನ್ನ ಕಳವು ಪ್ರಕರಣ, ಜಿಗಣಿಯ 1 ಚಿನ್ನ ಕಳವು ಪ್ರಕರಣ, ಬೊಮ್ಮನಹಳ್ಳಿಯ 15 ದ್ವಿಚಕ್ರ ವಾಹನ ಕಳವು ಪ್ರಕರಣ, ಹೆಬ್ಬಗೋಡಿಯ 1 ವಾಹನ ಕಳವು ಪ್ರಕರಣ ಪತ್ತೆಯಾಗಿದೆ ಎಂದಿದ್ದಾರೆ.
ಆರೋಪಿಗಳಿಂದ ಸುಮಾರು 10 ಲಕ್ಷ ರೂ ಬೆಲೆ ಬಾಳುವ 200 ಗ್ರಾಂ ತೂಕದ ಚಿನ್ನಾಭರಣ ಮತ್ತು 3 ಲಕ್ಷ ರೂ ಬೆಲೆಬಾಳುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹರೀಶ್ ಪಾಂಡೆ ಹೇಳಿದ್ದಾರೆ.
ಓದಿ :ಅವಹೇಳನಕಾರಿ ಹೇಳಿಕೆ: ನಟ ಚೇತನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಗೆ ಅನುಮತಿ ಕೇಳಿದ ಪೊಲೀಸರು