ಬೆಂಗಳೂರು: ಸರ್ಕಾರಿ ಸೇವಾನಿರತ ವೈದ್ಯರು 2019-20ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ವೈದ್ಯಕೀಯ ಡಿಪ್ಲೋಮಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕೃಪಾಂಕ ನೀಡಲು ಮಾನದಂಡಗಳನ್ನು ನಿಗದಿಪಡಿಸಿ ರಾಜ್ಯ ಸರ್ಕಾರ 2019ರ ಮಾ.8ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಪಡಿಸಿದೆ.
ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಡಾ. ಪ್ರೀತಿ ಜಿ. ರಾಥೋಡ್ ಹಾಗೂ ಇತರ ಸೇವಾನಿರತ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಾದ - ಪ್ರತಿವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ 2019ರ ಮಾ.8ರಂದು ಹೊರಡಿಸಿರುವ ಅಧಿಸೂಚನೆಯು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಇದರ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಗಳು - 2000ರ ಸೆಕ್ಷನ್ 9(4)ಗೆ ವಿರುದ್ಧವಾಗಿದೆ ಎಂದು ತಿಳಿಸಿ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿತು.
ಅರ್ಜಿಗೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿರೋಧ ವ್ಯಕ್ತಪಡಿಸಿದರೆ, ರಾಜೀವಗಾಂಧಿ ಆರೋಗ್ಯ ವಿವಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅರ್ಜಿದಾರರನ್ನು ಬೆಂಬಲಿಸಿದ್ದವು. ಅರ್ಜಿದಾರರ ಪರ ವಕೀಲೆ ಅಕ್ಕಮಹಾದೇವಿ ಹಿರೇಮಠ ವಾದ ಮಂಡಿಸಿದ್ದರು.