ಬೆಂಗಳೂರು: ಖಾಸಗಿ ವಾಹನಗಳ ಮೇಲೆ ಜನ ಪ್ರತಿನಿಧಿ, ಸಂಘಟನೆ ಸದಸ್ಯರು, ಹೀಗೆ ನಾನಾ ರೀತಿಯ ನಾಮಫಲಕಗಳನ್ನು ಅಳವಡಿಸಿಕೊಂಡು ವಾಹನದಲ್ಲಿ ಸಂಚರಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿ, ಇದಕ್ಕೆ ಕಡಿವಾಣ ಹಾಕಲು ಸೂಚಿಸಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಹೈಕೋರ್ಟ್ ಸರ್ಕಾರೇತರ ವಾಹನಗಳ ಮೇಲೆ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ತಮ್ಮ ಸಂಸ್ಥೆಗಳ ಅಥವಾ ಹುದ್ದೆಗಳ ನಾಮಫಲಕಗಳನ್ನು ಅಳವಡಿಸಿ ಸಂಚರಿಸುವುದು ಕಾನೂನು ಬಾಹಿರ. ಹೀಗಾಗಿ ಈ ತರಹದ ವಾಹನಗಳ ನಾಮಫಲಕ ತೆರವುಗೊಳಿಸಲು ಕೂಡಲೇ ಕ್ರಮ ಜರುಗಿಸಬೇಕು, ಜೊತೆಗೆ ಈ ಕುರಿತ ವರದಿಯನ್ನು ಜನವರಿ 22 ಕ್ಕೆ ನೀಡಲು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.