ಬೆಂಗಳೂರು: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು, ಶ್ರೀಗಳು ಸಲಹೆ ನೀಡಬಹುದೇ ಹೊರತು ಆದೇಶ ನೀಡಬಾರದು ಈ ವಿಚಾರದಲ್ಲಿ ಸಮುದಾಯ ನಿಮ್ಮ ಜೊತೆಯೇ ಇರಲಿದೆ ಎಂದು ಸಿಎಂಗೆ ಶ್ರೀಗಳ ನಿಯೋಗ ಅಭಯಾತ್ಮಕ ಆಶೀರ್ವಾದ ನೀಡಿದೆ.
ಹರ ಜಾತ್ರೆಯಲ್ಲಿ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡದೇ ಇದ್ದಲ್ಲಿ ಇಡೀ ಸಮುದಾಯ ನಿಮ್ಮಿಂದ ದೂರ ಸರಿಯಲಿದೆ ಎಂದು ವಚನನಾಂದ ಸ್ವಾಮೀಜಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಪಂಚಮಸಾಲಿ ಮಠಾಧೀಶರು ಸಿಎಂ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಕೂಡಲಸಂಗಮ ಪಂಚಮಸಾಲಿ ಮಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ , ಭಗೀರಥ ಪೀಠದ ಪುರುಷೋತ್ತಮ ಮಹಾನಂದ ಶ್ರೀ, ಮಾದರ ಚನ್ನಯ್ಯ ಗುರುಪೀಠದ ಶ್ರೀ, ಭೋವಿ ಗುರು ಪೀಠದ ಸಿದ್ಧರಾಮ ಸ್ವಾಮೀಜಿ ಮತ್ತು ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮಿಜೀ ಹಾಗೂ ಯಾದವ ಗುರು ಪೀಠದ ಕೃಷ್ಣಯಾದವಾನಂದ ಸ್ವಾಮೀಜಿ ಯವರ ನಿಯೋಗ ಭೇಟಿ ನೀಡಿತು. ವಚನನಾಂದ ಸ್ವಾಮೀಜಿಗಳು ಹೇಳಿಕೆ ತಪ್ಪು ಸಮುದಾಯ ನಿಮ್ಮ ಜೊತೆಯಲ್ಲಿಯೇ ಇರಲಿದೆ ಎಂದು ತಿಳಿಸಿದ್ದಾರೆ.
ಸಿಎಂ ಭೇಟಿ ನಂತರ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂಗೆ ಅಗೌರವ ಆಗುವ ರೀತಿ ಹಾಗೂ ಬೇಸರ ಆಗುವ ರೀತಿ ನಡೆದುಕೊಳ್ಳಬಾರದು, ಅವತ್ತು ನಡೆದ ಘಟನೆಯಿಂದ ಪಂಚಮಸಾಲಿ ಸಮುದಾಯಕ್ಕೆ ಬೇಸರವಾಗಿದೆ. ವಚನಾನಂದ ಸ್ವಾಮೀಜಿಯವರು ಹೇಳಿರೋದು ಸರಿಯಲ್ಲ. ಸಿಎಂ ಗೆ ನಾವು ಸಲಹೆ ಕೊಡಬಹುದು ಅದು ಸಾತ್ವಿಕವಾಗಿ ಇರಬೇಕು ಆದರೆ ಅದು ಆದೇಶ ಮಾಡುವ ಹಾಗೆ ಇರಬಾರದು ಎಂದರು.