ಬೆಂಗಳೂರು: ಅಧಿವೇಶನವನ್ನು ಎರಡು ವಾರ ವಿಸ್ತರಿಸುವಂತೆ ಮಾಡಿದ್ದ ಮನವಿಗೆ ಪುರಸ್ಕಾರ ಸಿಗದ ಹಿನ್ನೆಲೆ, ಪ್ರತಿಪಕ್ಷಗಳು ವಿಧಾನಸಭೆ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದವು. ಇದಲ್ಲದೆ ಮಧ್ಯಾಹ್ನ ನಂತರ ಹಮ್ಮಿಕೊಂಡಿದ್ದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ ಕಾರ್ಯಕ್ರಮದಲ್ಲೂ ಕಾಂಗ್ರೆಸ್ ನಾಯಕರು ಅನುಪಸ್ಥಿತರಾಗಲು ತೀರ್ಮಾನಿಸಿದ್ದರು. ಈ ಹಿನ್ನೆಲೆ ವಿಧಾನಸೌಧದಿಂದ ತಮ್ಮ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ವಿವಿಧ ಮುಖಂಡರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಸಿದ್ದರಾಮೇಶ್ವರ ಶ್ರೀ ಭೇಟಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಚಿವರಾದ ಪ್ರಭು ಚೌಹಾಣ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ವೆಂಕಟರಮಣಪ್ಪ, ಶಿವರಾಜ ತಂಗಡಗಿ, ಸಂಸದ ಉಮೇಶ್ ಜಾಧವ್, ಶಾಸಕರಾದ ಚಂದ್ರಪ್ಪ, ಭೀಮಾ ನಾಯ್ಕ, ಅಖಂಡ ಶ್ರೀನಿವಾಸಮೂರ್ತಿ, ಪ್ರಕಾಶ್ ರಾಥೋಡ್, ಮಾಜಿ ಶಾಸಕ ವೆಂಕಟಸ್ವಾಮಿ, ಸೀತಾರಾಂ ಮತ್ತಿತರರು ನಿಯೋಗದಲ್ಲಿ ಇದ್ದರು.
ವರದಿ ಸಲ್ಲಿಕೆ : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಯಾವುದೇ ಜಾತಿಯನ್ನು ಪಟ್ಟಿಯಿಂದ ಕೈ ಬಿಡುವ ಪ್ರಸ್ತಾವನೆ ಇಲ್ಲ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ರಾಜ್ಯ ಸರ್ಕಾರ ತಿಳಿಸಬೇಕು. ಎರಡೂ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ನಿಯೋಗ ಮನವಿ ಸಲ್ಲಿಸಿತು.
ಕಾಫಿ ಬೆಳೆಗಾರರ ನಿಯೋಗ ಭೇಟಿ: ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಭೂ ಕಬಳಿಕೆ ಕಾಯಿದೆ ತಿದ್ದುಪಡಿ ಸೇರಿದಂತೆ ಒಕ್ಕೂಟದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ನಿಯೋಗ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಮಾಜಿ ಸಚಿವರಾದ ಜಾರ್ಜ್, ಬಿ.ಎಲ್. ಶಂಕರ್, ಮೋಟಮ್ಮ, ಶಾಸಕ ರಾಜೇಗೌಡ, ಮಾಜಿ ಶಾಸಕ ಶ್ರೀನಿವಾಸ್, ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ. ಮೋಹನಕುಮಾರ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ ಹಾಜರಿದ್ದರು.
ಲಿಂಗಾಯತ ಯುವ ಮುಖಂಡರು ಭೇಟಿ: ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವನಗೌಡ ಬಾದರ್ಲಿ, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.
ಇದನ್ನೂ ಓದಿ: ನಾಲ್ಕು ದಿನ ರಾಷ್ಟ್ರಪತಿ ರಾಜ್ಯ ಪ್ರವಾಸ: 5 ಜಿಲ್ಲೆಗಳ ವಿವಿಧ ಕಾರ್ಯಕ್ರಮದಲ್ಲಿ ಭಾಗಿ