ಬೆಂಗಳೂರು : ಪಠ್ಯ ಪರಿಷ್ಕರಣೆ ವಿಚಾರವನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಏನು ಬದಲಾವಣೆ ಮಾಡಬೇಕೋ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಲವು ಸಾಹಿತಿಗಳು, ಸ್ವಾಮೀಜಿಗಳು, ಹಿರಿಯರು ನಿನ್ನೆ ಏನೆಲ್ಲ ಮಾತಾಡಿದ್ದಾರೋ ಅದರ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲಿಸುತ್ತೇವೆ. ಸರ್ಕಾರ ಬದಲಾವಣೆ ಮಾಡುವ ವಿಚಾರದಲ್ಲಿ ಮುಕ್ತವಾಗಿದೆ. ನಾವು ಯಾವುದನ್ನೂ ಪ್ರತಿಷ್ಠೆಯಾಗಿ ತಗೊಂಡಿಲ್ಲ. ಈಗಾಗಲೇ ಪಠ್ಯ ಪರಿಷ್ಕರಣೆ ಪಬ್ಲಿಕ್ ಡೊಮೇನ್ನಲ್ಲಿದೆ. ಲೋಪ ಇದ್ದರೆ ತಿಳಿಸಬಹುದು ಎಂದರು.
ಅಗ್ನಿಪಥ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರೀತಿದೆ. ಅಗ್ನಿಪಥ ಯೋಜನೆ ಮೂಲಕ ಸಶಕ್ತ ಯುವ ಶಕ್ತಿ ರೂಪಿಸಲಾಗುತ್ತೆ. ಈಗಾಗಲೇ ಸೇನಾ ಪರೀಕ್ಷೆ ಬರೆದ ಕೆಲವರಿಗೆ ಆತಂಕ ಇರಬಹುದು. ಅದನ್ನೆಲ್ಲ ಕೇಂದ್ರ ಸರ್ಕಾರ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಈ ನೆಪದಲ್ಲಿ ಪ್ರತಿಭಟನೆ, ರೈಲಿಗೆ ಬೆಂಕಿ ಹಾಕೋದು ಸರಿಯಲ್ಲ. ಖಾನಾಪುರ ಬಂದ್ ಕರೆ ಕೊಟ್ಟಿದ್ದಾರೆ. ಕಾಂಗ್ರೆಸ್ ಬೆಂಕಿಗೆ ತುಪ್ಪಹಾಕ್ತಿರೋದಕ್ಕೆ ಇದೇ ಸಾಕ್ಷಿ ಎಂದು ಕಿಡಿ ಕಾರಿದರು.
ಚಾರ್ಲಿ ಸಿನಿಮಾಕ್ಕೆ ಜಿಎಸ್ಟಿ ವಿನಾಯಿತಿ ಹಿನ್ನೆಲೆ ಬೇರೆ ಚಿತ್ರಗಳಿಗೂ ತೆರಿಗೆ ವಿನಾಯಿತಿಗೆ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಯಾರೆಲ್ಲ ಮನವಿ ಕೊಡ್ತಾರೋ ಅವುಗಳ ಬಗ್ಗೆ ಪರಿಶೀಲನೆ ಮಾಡ್ತೇವೆ ಎಂದರು.
ಮೋದಿ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ : ನಾಳೆ ಸಂಜೆ ಪ್ರಧಾನಿ ಮೋದಿ ಮೈಸೂರಿನಲ್ಲಿ ಸಾರ್ವಜನಿಕ ಸಭೆ, ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಡ್ತಿದ್ದಾರೆ. ಎಲ್ಲ ಸಿದ್ಧತೆಗಳೂ ಆಗಿವೆ. ಮೋದಿ ಎರಡು ದಿನಗಳ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬರುತ್ತಿದ್ದಾರೆ. ಐಐಎಸ್ಸಿಯಲ್ಲಿ ಉದ್ಘಾಟನೆ, ಅಡಿಗಲ್ಲು ಸಮಾರಂಭ ಇದೆ. ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಇದೆ. ವಿವಿಧ ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ. ಪ್ರಧಾನಿಯವರ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದರು.
ಇದನ್ನೂ ಓದಿ : ಪ್ರಧಾನಿ ಮೋದಿ ಕಾರ್ಯಕ್ರಮ: ಸಿಎಂ ಬೊಮ್ಮಾಯಿಗೆ ಕೋವಿಡ್ ಪರೀಕ್ಷೆ