ಬೆಂಗಳೂರು : ಕರ್ನಾಟಕದ ಐತಿಹಾಸಿಕ ಸ್ಥಳಗಳ ಚಿತ್ರಪ್ರದರ್ಶನವನ್ನು ಆನ್ಲೈನ್ ಮೂಲಕ ಬಿತ್ತರಿಸಲಾಗುತ್ತಿದೆ. 15 ದಿನಗಳ ಕಾಲ ಚಿತ್ರ ಪ್ರದರ್ಶನ ನಡೆಯಲಿದ್ದು, ಇನ್ನು ಮುಂದೆಯೂ ಚಿತ್ರಕಲಾ ಪರಿಷತ್ ಆನ್ಲೈನ್ ಮೂಲಕ ಪ್ರದರ್ಶನ ನಿರಂತರವಾಗಿ ಏರ್ಪಡಿಸಲಾಗುತ್ತದೆ ಎಂದು ಚಿತ್ರಕಲಾ ಪರಿಷತ್ನ ಅಧ್ಯಕ್ಷ ಬಿ.ಎಲ್ ಶಂಕರ್ ತಿಳಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅರವತ್ತು ವರ್ಷ ಪೂರೈಸಿದ ಹಿನ್ನೆಲೆ, ಕರ್ನಾಟಕದ ಐತಿಹಾಸಿಕ ಸ್ಥಳಗಳ ಚಿತ್ರಪ್ರದರ್ಶನವನ್ನು ಚಿತ್ರಕಲಾ ಪರಿಷತ್ನಲ್ಲಿ ಏರ್ಪಡಿಸಿತ್ತು. ಪ್ರತೀ ಜಿಲ್ಲೆಗಳ ವಿಶೇಷ ಸ್ಥಳಗಳು, ಕಟ್ಟಡಗಳು, ದೇವಸ್ಥಾನಗಳ ಚಿತ್ರಕಲೆಯನ್ನು ಸಂಗ್ರಹಿಸಿ ಪ್ರದರ್ಶಿಸಲಾಗುತ್ತಿದೆ.
ಪ್ರಖ್ಯಾತ ಕಲಾವಿದರಾದ ಡಾ.ಬಿ.ಕೆ.ಎಸ್.ವರ್ಮಾ ಉದ್ಘಾಟನೆಗೊಳಿಸಿದರು. ನಂತರ ಅಧ್ಯಕ್ಷ ಬಿ.ಎಲ್ ಶಂಕರ್ ಮಾತನಾಡಿ, ಅರವತ್ತನೇ ವರ್ಷದ ಹಿನ್ನೆಲೆ ಆರ್.ಆರ್ ನಗರದಲ್ಲಿ ಹೊಸದಾಗಿ ನೂತನ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿದೆ. ಚಿತ್ರಸಂತೆಯನ್ನೂ ಈ ಬಾರಿ ಆನ್ಲೈನ್ ಮಾಡಲು ಯೋಜನೆಯಿದೆ ಎಂದರು.
ಸಂಜೆ ತರಗತಿಗೆ ಹೆಚ್ಚಿನ ಪ್ರೋತ್ಸಾಹ, ಪಠ್ಯಕ್ಕೆ ಎರಡು ಹೊಸ ವಿಷಯ ಸೇರ್ಪಡೆ ದೇಶದಲ್ಲೇ ಪ್ರಥಮ ಬಾರಿಗೆ ಕಳೆದ ವರ್ಷದಿಂದ ಸಿಕೆಪಿಯಲ್ಲಿ ಸಂಜೆ ತರಗತಿಗಳನ್ನು ಆರಂಭಿಸಲಾಗಿದ್ದು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಚಿತ್ರಕಲಾ ಪರಿಷತ್ನ ಅಧ್ಯಕ್ಷ ಬಿ.ಎಲ್ ಶಂಕರ್.
ದಿನದ ಕಾಲೇಜಿನಲ್ಲಿ ಸಿರಾಮಿಕ್ಸ್ ಹಾಗೂ ಆನಿಮೇಷನ್ ಹೊಸ ಕೋರ್ಸ್ಗಳ ಸೇರ್ಪಡೆ ಮಾಡಲಾಗುತ್ತಿದೆ ಎಂದರು. ಹಗಲಿನ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು, ಸಂಜೆ ಕಾಲೇಜಿನಲ್ಲಿ 120 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದರು. ಇನ್ನು, ಹಳೇ ಕಲಾವಿದರನ್ನು ನೆನಪಿಸುವ ಕಾರ್ಯಕ್ರಮದ ವತಿಯಿಂದ ಮುಂದಿನ ದಿನಗಳಲ್ಲಿ ಎಲ್ಲಾ ಕಲಾವಿದರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.