ಬೆಂಗಳೂರು : ಕೊರೊನಾ ನಿರ್ವಹಣೆ ಕಾರ್ಯಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ಲೆಕ್ಕ ಕೊಡಿ' ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಾವು ಲೆಕ್ಕ ಕೊಡಲು ಸಿದ್ಧರಾಗಿಯೇ ಇದ್ದೇವೆ. ಆದರೆ, ಅವರ ಅವಧಿಯಲ್ಲಿ ನಡೆದಿರುವ 97 ಬೃಹತ್ ಹಗರಣಗಳ ಬಗ್ಗೆಯೂ ಅವರು ಲೆಕ್ಕ ಕೊಡಬೇಕಲ್ಲವೇ?. ಹಾಗಾಗಿಯೇ, ಸಿದ್ಧರಾಮಯ್ಯ ಅವರನ್ನು ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇವೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಅಲ್ಲದೆ 97 ಹಗರಣಗಳ ಬಗ್ಗೆ ನೀಡಿದ್ದ 37,000 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇವೆ. ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಿದ್ದೇವೆ ಹಾಗೂ ಎಲ್ಲಾ ದಾಖಲೆಗಳನ್ನು ನಿಮ್ಮ ಕಛೇರಿಗೆ ನೀಡಿ ದೂರುಗಳ ಸ್ವೀಕೃತ ಪ್ರತಿಗಳನ್ನು ಸಹ ಪಡೆದಿದ್ದೇವೆ. ನಿಮಗೆ ಪತ್ರ ಕೂಡ ಬರೆದಿದ್ದೇನೆ ಎಂದರು.
ಅದಕ್ಕಾಗಿ ನಾನು ನೇರವಾಗಿ ಸವಾಲು ಹಾಕುತ್ತಿದ್ದೇನೆ. ಲೆಕ್ಕ ಕೊಡೋಕೆ ನಾವು ರೆಡಿ, ನೀವು ಕೃಷಿ ಹೊಂಡ, ಇಂದಿರಾ ಕ್ಯಾಂಟೀನ್ ಹಗರಣಗಳ ಬಗ್ಗೆ ಮಾತನಾಡಿ. ತಾಕತ್ತಿದ್ದರೆ 24 ಗಂಟೆಗಳಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.