ಬೆಂಗಳೂರು : ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಿಗೆ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಅತಿ ಹೆಚ್ಚು ಜನರ ಓಡಾಟವಿರುವ ರಾಜಧಾನಿ ಬೆಂಗಳೂರಿನಲ್ಲಿಯೂ ಕೋವಿಡ್ 3ನೇ ಅಲೆ ಹಬ್ಬುವ ಭೀತಿ ಎದುರಾಗಿದೆ. ಆದರೆ, ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವ ಹಿನ್ನೆಲೆ ನಗರಕ್ಕೆ ವೀಕೆಂಡ್ ಕರ್ಫ್ಯೂ ಪ್ರಸ್ತಾವನೆ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಪಾಲಿಕೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಂಡು ಬರುವ ಎಲ್ಲಾ ಕೋವಿಡ್ ಪಾಸಿಟಿವ್ ರೋಗಿಗಳ ಸಂಪರ್ಕಿತರ (ಕಾಂಟ್ಯಾಕ್ಟ್ ಟ್ರೇಸಿಂಗ್)ನ್ನು ಪತ್ತೆ ಮಾಡಲಾಗುತ್ತಿದೆ. ಕಂಟೈನ್ಮೆಂಟ್, ಔಷಧ ಪೂರೈಕೆ ಮಾಡುವ ಕೆಲಸವನ್ನು ವಾರ್ಡ್ ಮಟ್ಟದಲ್ಲಿಯೇ ಮಾಡಲಾಗುತ್ತಿದೆ. ಯಾವುದೇ ಪ್ರಕರಣಗಳು ಮಿಸ್ಸಿಂಗ್ ಇಲ್ಲ, ಟ್ರೇಸ್ ಮಾಡಲಾಗುತ್ತಿದೆ ಎಂದರು.
ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತಾಗಿ ಮಾತನಾಡಿ, ಸಿಎಂ ಕಟ್ಟುನಿಟ್ಟಾಗಿ ಪಾಲನೆ ಮಾಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆ ಪ್ರಕಾರ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿದೆ ಎಂದರು.
ಪಾಸಿಟಿವಿಟಿ ಪ್ರಮಾಣ ಹೆಚ್ಚು ಇರುವ ಕಡೆ ಮತ್ತು ಕೇರಳ ಗಡಿ ಜಿಲ್ಲೆಗಳಲ್ಲಿ ಮಾತ್ರ ವೀಕೆಂಡ್ ಕರ್ಫ್ಯೂ ಇದೆ. ಬೆಂಗಳೂರು ನಗರದಲ್ಲಿ ಶೇ.1ಕ್ಕಿಂತ ಕಡಿಮೆ ಇರುವುದರಿಂದ ಸದ್ಯ ವೀಕೆಂಡ್ ಕರ್ಫ್ಯೂ ಪ್ರಸ್ತಾವನೆ ಇಲ್ಲ. ತಜ್ಞರ ಅಭಿಪ್ರಾಯದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೌರವ್ ಗುಪ್ತ ತಿಳಿಸಿದರು.