ಬೆಂಗಳೂರು: ತಮ್ಮ ದೆಹಲಿ ಭೇಟಿ ರಾಜ್ಯ ಬಿಜೆಪಿ ಪಾಳಯದಲ್ಲಿ ತಲ್ಲಣ ಮೂಡಿಸುತ್ತಿದ್ದಂತೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ನನ್ನ ದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದಿದ್ದಾರೆ.
ನಾನು ರಾಷ್ಟ್ರೀಯ ನಾಯಕರ ಭೇಟಿಗಾಗಿಯಾಗಲಿ, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೋರಿದ್ದಾರೆ.
ನಿನ್ನೆ ತಡರಾತ್ರಿ ಬೆಲ್ಲದ ಹಠಾತ್ ದೆಹಲಿಗೆ ತೆರಳಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಜೂನ್ 16ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಹಿನ್ನೆಲೆ ಅರವಿಂದ ಬೆಲ್ಲದ ದೆಹಲಿ ಭೇಟಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ವಿರೋಧಿ ಬಣ ಮತ್ತ ನಾಯಕತ್ವ ಬದಲಾವಣೆಯ ಕಸರತ್ತು ನಡೆಸುತ್ತಿದೆಯೇ ಎಂಬ ಪ್ರಶ್ನೆ ಮೂಡಿತ್ತು. ಇದಕ್ಕೆ ಅರವಿಂದ ಬೆಲ್ಲದ, ನನ್ನ ದೆಹಲಿ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.