ಬೆಂಗಳೂರು: ನಗರದ ಸಾರ್ವಜನಿಕರ ಕಸದ ಸಮಸ್ಯೆ, ರಸ್ತೆಗುಂಡಿ ಸಮಸ್ಯೆ ಸೇರಿದಂತೆ ನಾನಾ ಮೂಲಸೌಕರ್ಯ ಸಮಸ್ಯೆಗಳನ್ನು ಬಿಬಿಎಂಪಿ ಗಮನಕ್ಕೆ ತರುವ ನಿಟ್ಟಿನಲ್ಲಿ 'ಸಹಾಯ' ಆ್ಯಪ್ ಅನ್ನು ಪರಿಚಯಿಸಲಾಗಿತ್ತು. ಆದ್ರೆ ಸಾಗರೋಪಾದಿಯಲ್ಲಿ ಸಮಸ್ಯೆಗಳು ದಾಖಲಾದ್ರೂ, ಒಂದೂ ಪರಿಹಾರ ಕಾಣದೆ ಜನರೇ ಬೇಸತ್ತು ಹೋಗಿದ್ದರು.

ಇದೀಗ ನಗರದ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಲೆಟ್ಸ್ ಬಿ ದ ಚೇಂಜ್ ಎಂಬ ಸಂಸ್ಥೆಯೊಂದು ಬಿಬಿಎಂಪಿ ಜೊತೆಗೆ ಸೇರಿ 'ಬೆಂಗಳೂರು ವೀರರು' ಎಂಬ ವೇದಿಕೆಗೆ ಗಾಂಧಿ ಜಯಂತಿಯಂದು ಚಾಲನೆ ನೀಡಲಿದ್ದಾರೆ. ಈ ವೇದಿಕೆಗೆ ನಗರದ 150 ಎನ್ಜಿಒಗಳು ಕೈ ಜೋಡಿಸಿವೆ. ಹೀಗಾಗಿ ಬಿಬಿಎಂಪಿಯು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ 'ಸಹಾಯ' ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಜನರು ಹಾಗೂ ಪಾಲಿಕೆಯ ನಡುವಿನ ಕೊಂಡಿಯಾಗಿ ಈ ಎನ್ಜಿಒಗಳು ಕೆಲಸ ಮಾಡಲಿವೆ.
ಸಾರ್ವಜನಿಕರು ವಿವಿಧ ಸಹಾಯವಾಣಿಗಳಿಗೆ ದಾಖಲಿಸುವ ದೂರುಗಳನ್ನು ಈ ವೇದಿಕೆ ನಿಭಾಯಿಸಲಿದ್ದು, ಸಾರ್ವಜನಿಕರಿಗೆ ವಿವಿಧ ಇಲಾಖೆಗಳಿಂದ ಬೇಕಾಗುವ ಸಹಾಯವನ್ನು ನೀಡಲಿದೆ. ಇನ್ನಾದ್ರೂ ಪಾಲಿಕೆ ಅಧಿಕಾರಿಗಳು ನಗರದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.