ಬೆಂಗಳೂರು: ಕೋವಿಡ್-19 ಹಿನ್ನೆಲೆ ಈಗಾಗಲೇ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿ ಸಹ ಇನ್ನಷ್ಟು ವಿಳಂಬವಾಗಲಿದೆ.
2020 ರ ಅಂತ್ಯಕ್ಕೆ ಕೆಂಗೇರಿ ಹಾಗೂ ಕನಕಪುರ ರಸ್ತೆ ಮಾರ್ಗ ಮುಗಿಸುವುದಾಗಿ ಬಿಎಂಆರ್ ಸಿಎಲ್ ಹೇಳಿತ್ತು. ಆದರೆ ಲಾಕ್ಡೌನ್ನಿಂದಾಗಿ ಎಲ್ಲವೂ ಈಗ ತಲೆಕೆಳಗಾಗಿದೆ. ಮೆಟ್ರೋ ಕಾಮಗಾರಿ ಪುನಾರಂಭವಾದ್ರು ಕೂಡ ಕಾರ್ಮಿಕರ ಕೊರತೆ ಎದುರಾಗಿದೆ. ಯಾಕಂದರೆ ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರೇ ಹೆಚ್ಚಾಗಿ ಮೆಟ್ರೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ ಹೋಗಿದ್ದಾರೆ. ಹೀಗಾಗಿ ಮೆಟ್ರೋ ಕಾಮಗಾರಿ ಕುಂಠಿತಗೊಳ್ಳುತ್ತಿದೆ.
2020 ಕ್ಕೆ ಕಾಮಗಾರಿ ಮುಗಿಯುವುದು ಅಸಾಧ್ಯವಾಗಿದ್ದು, ಎರಡನೇ ಹಂತದ ಟನಲ್ ಇಳಿಕೆಯು ವಿಳಂಬವಾಗುತ್ತಿದೆ. ಚೀನಾದಿಂದ ಟಿಬಿಎಂ ತರಿಸಿ ಅಸೆಂಬರ್ ಮಾಡಿರೋ ಬಿಎಂಆರ್ ಸಿಎಲ್, ಏಪ್ರಿಲ್ ವೇಳೆಗೆ ಟನಲ್ ಬೋರಿಂಗ್ ಮಷಿನ್ ಅನ್ನು ನೆಲದಾಳಕ್ಕೆ ಇಳಿಸಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಚೀನಾ ಟನಲ್ ಬೋರಿಂಗ್ ತಂತ್ರಜ್ಞಾನ ಟ್ರಾನ್ಸ್ಫರ್ ಮಾಡುವುದು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಹಂತ ಕಾಮಗಾರಿಯೂ ವಿಳಂಬವಾಗಲಿದ್ದು, ನಿಗಮದ ಲೆಕ್ಕಾಚಾರ ಉಲ್ಟಾ ಹೊಡೆದಿದೆ.