ಬೆಂಗಳೂರು: ಶ್ರಾವಣ ಮಾಸದ ಮೊದಲನೆ ಹಬ್ಬ ನಾಗರ ಪಂಚಮಿಯನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೊರೊನಾ ಸೋಂಕು ಆತಂಕದ ನಡುವೆಯೂ ನಾಡಿನೆಲ್ಲೆಡೆ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿದೆ. ಸಿಲಿಕಾನ್ ಸಿಟಿಯಲ್ಲೂ ನಾಗರ ಪಂಚಮಿ ಹಬ್ಬಾಚರಣೆ ನಡೆಯುತ್ತಿದೆ.
ನಾಗರ ಪಂಚಮಿ ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ವಿಶೇಷ ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ಭಕ್ತರು ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲಾ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಇದು ಮುತ್ತೈದೆಯರು ಹಾಗೂ ಅಣ್ಣ-ತಂಗಿ ಸೇರಿ ಪೂಜಿಸಲ್ಪಡುವ ಹಬ್ಬವೆಂಬ ಪ್ರತೀತಿ ಇದೆ.
ಇನ್ನು ನಗರಾದ್ಯಾಂತ ಭಕ್ತಾದಿಗಳು ದೇವಸ್ಥಾನಗಳಿಗೆ ಭೇಟಿ ನೀಡಿ ನಾಗದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಕೊರೊನಾ ಸೋಂಕು ಇರುವುದರಿಂದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಗರ ಕಲ್ಲಿಗೆ ಅಥವಾ ದೇವಸ್ಥಾನದ ಆವರಣದಲ್ಲಿರುವ ಹುತ್ತಕ್ಕೆ ಗುಂಪು ಸೇರಿ ಪೂಜೆ ಮಾಡಲು ಅವಕಾಶ ನೀಡಿಲ್ಲ.
ಹಬ್ಬದ ಅಂಗವಾಗಿ ದೇವರನ್ನು ಹಾಗೂ ದೇವಸ್ಥಾನವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ. ಎಲ್ಲರೂ ನಾಗ ದೇವರಿಗೆ ಪೂಜೆ ಸಲ್ಲಿಸುವುದರಲ್ಲಿ ತಲ್ಲೀನರಾಗಿದ್ದಾರೆ. ತಮ್ಮ ಕುಟುಂಬದ ಸುಖ-ಶಾಂತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಜನರು ಗುಂಪು ಸೇರದಂತೆ ಕ್ರಮ ವಹಿಸಿಕೊಂಡಿದ್ದಾರೆ.