ಬೆಂಗಳೂರು: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲು ಹಾಗೂ ತನಿಖೆಯ ಸಮಗ್ರ ಮಾಹಿತಿಯನ್ನು ನೇರವಾಗಿ ತಮಗೇ ವರದಿ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಡವಟ್ಟಿನ ಹೇಳಿಕೆಯಿಂದಾಗಿ ಸಿಎಂ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದೇನೆ. ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದ್ದೇನೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ಸಲಹೆ ನೀಡಿದ್ದೇನೆ.
ಮೈಸೂರು ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪೊಲೀಸರು ಸಂತ್ರಸ್ತೆ ಮತ್ತು ಅವರ ಪೋಷಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಲಭ್ಯವಿರುವ ಮಾಹಿತಿ ಮತ್ತು ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಿದ್ದಾರೆ ಎಂದರು.
ಇದನ್ನೂ ಓದಿ: Mysore Gangrape case: ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ರಾಜ್ಯಾದ್ಯಂತ ಪ್ರತಿಭಟನೆ
ಪ್ರಕರಣದ ತನಿಖೆಯನ್ನು ತೀವ್ರಗತಿಯಲ್ಲಿ ಮಾಡಬೇಕು ಮತ್ತು ವಿಶೇಷ ತಂಡ ರಚಿಸಬೇಕು. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಗೊಳಪಡಿಸಬೇಕು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಆರೋಪಿಗಳ ಬಗ್ಗೆ ಶೋಧನೆ ನಡೆಯುತ್ತಿದೆ. ಪ್ರಕರಣ ಸಂಬಂಧ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೆ ನನ್ನ ಸಹಮತ ಇಲ್ಲ, ಕೂಡಲೇ ಸ್ಪಷ್ಟೀಕರಣ ಕೊಡುವಂತೆ ತಿಳಿಸಿದ್ದೇನೆ.
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಮತ್ತು ನೇರವಾಗಿ ನನಗೆ ವರದಿ ಮಾಡಬೇಕು ಎನ್ನುವ ಸೂಚನೆ ನೀಡಿದ್ದೇನೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಕೂಡ ಅವರನ್ನು ಸದೆ ಬಡಿಯುತ್ತೇವೆ. ಇಂತಹ ಘಟನೆಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.