ಬೆಂಗಳೂರು: ಸಿನಿಮಾ ರಂಗದಲ್ಲಿ ಡ್ರಗ್ಸ್ ಮಾಫಿಯಾ ಇಲ್ಲವೇ ಇಲ್ಲವೆಂದು ಹೇಳುವುದಿಲ್ಲ. ಆದರೆ, ಅದು ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಜೀವಂತವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದರಲ್ಲಿ ಎಲ್ಲರ ತಪ್ಪು ಇದೆ. ಸ್ಯಾಂಡಲ್‌ವುಡ್‌ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ಎಷ್ಟು ಶೇಕಡವಾರು ಇದೆ. ಅದನ್ನು ಇಡೀ ಚಿತ್ರರಂಗಕ್ಕೆ ಅನ್ವಯಿಸಿ ಕೆಟ್ಟದಾಗಿ ತೋರಿಸುವುದು ತಪ್ಪು. ಈ ಮೂಲಕ ಕೆಟ್ಟ ಸಂದೇಶ ತೋರುತ್ತದೆ. ಬರೀ ಸಿನಿಮಾ ಕ್ಷೇತ್ರವನ್ನು ಗುರಿ ಮಾಡಬೇಡಿ ಎಂದು ಮನವಿ ಮಾಡಿದರು.
ಯುವ ಜನಾಂಗಕ್ಕೆ ಈ ಚಟ ಇದೆ ಎಂಬುದು ಕಹಿ ಸತ್ಯ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲೇಬೇಕು, ಅಲ್ಲಿಯವರೆಗೆ ಕಾಯಬೇಕು ಎಂದರು.
ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಚಿತ್ರರಂಗಗಳಲ್ಲೂ ಪೀಳಿಗೆ ಬದಲಾಗಿದೆ. ಹಿರಿಯರ ಪೀಳಿಗೆ ಇದ್ದಾಗ ಇದ್ದ ಗೌರವ, ಭಯ ಈಗಿನ ಯುವಕರಲ್ಲಿ ಕಾಣುತ್ತಿಲ್ಲ. ಪ್ರತಿ ರಂಗದಲ್ಲಿ ಒಳ್ಳೆಯದು, ಕೆಟ್ಟದ್ದು ಇರುತ್ತದೆ. ಆದರೆ, ಸಿನಿಮಾ ಕ್ಷೇತ್ರವನ್ನೇ ಗುರಿ ಮಾಡುವುದು ತಪ್ಪು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಹೇಳಿದರು.
ಇಂಥದ್ದನ್ನು ಯಾರೂ ಹೇಳಿ ಮಾಡಲ್ಲ. ಇದು ಬೇರೆಯದೇ ವಾತಾವರಣದಲ್ಲಿ ನಡೆಯುತ್ತದೆ. ಈ ಅಭ್ಯಾಸ ಆದವರಿಗೆ ಇದನ್ನು ಬಿಡುವುದು ಕಷ್ಟ. ಆರೋಪ ಸಾಬೀತಾಗುವ ಮೊದಲೇ ಜಡ್ಜ್ಮೆಂಟ್ ಕೊಡಬಾರದು. ಎಷ್ಟು ಪರ್ಸೆಂಟ್ ಇದೆ ಎಂಬುದನ್ನು ನೋಡಬೇಕು. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ತನಿಖಾಧಿಕಾರಿಗಳೇ ಮಾಹಿತಿ ಕೊಡಬೇಕು ಎಂದರು.