ಬೆಂಗಳೂರು: ಸ್ನೇಹಿತನ ಮನೆಗೆ ಬಂದು ಮದ್ಯ ಸೇವನೆ ಮಾಡಿದ್ದ ಗೆಳೆಯರು ಆತನ ಮನೆಯಲ್ಲಿಯೇ ಹಣ ಕಳ್ಳತನ ಮಾಡಿ, ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡು ಗೆಳೆಯನ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಹಾನಗರದಲ್ಲಿ ನಡೆದಿದೆ.
ಕೊರೊನಾ ಕಾರಣಕ್ಕೆ ಒಬ್ಬರೇ ವಾಸವಿದ್ದರು..
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಪ್ಪ ಗಾರ್ಡನ್ನ ಮನೆಯೊಂದರಲ್ಲಿ ವಾಸವಾಗಿದ್ದ ರಾಜಸ್ಥಾನ ಮೂಲದ ಮನೋಹರ್ ವಿ. ರಾಜಪುತ್, 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ಅಡುಗೆ ಕ್ಯಾಟರಿಂಗ್ ಮಾಡುತ್ತಿದ್ದರು. ಕೊರೊನಾ ಕಾರಣಕ್ಕಾಗಿ ಹೆಂಡತಿ-ಮಕ್ಕಳನ್ನು ಊರಿಗೆ ಕಳುಹಿಸಿ ಮನೆಯಲ್ಲೇ ಒಬ್ಬರೇ ವಾಸವಿದ್ದರು.
ಆಗ ಎಣ್ಣೆ ಪಾರ್ಟಿಗೆ ಸಿಕ್ಕಿದ ಹಳೆ ಸ್ಕೂಲ್‌ಮೇಟ್..
ಈ ವೇಳೆ 15 ವರ್ಷಗಳ ಹಿಂದೆ ಸ್ಕೂಲ್‌ಮೇಟ್ ಆಗಿದ್ದ ವಿಶ್ವನಾಥ ಸಿಕ್ಕಿದ್ದಾನೆ. ಮನೆಯಲ್ಲೇ ಮನೋಹರ್ ಒಬ್ಬನೇ ಉಳಿದುಕೊಂಡಿದ್ದರಿಂದ ಆಗಾಗ ವಿಶ್ವನಾಥ ಬಂದು ಹೋಗುತ್ತಿದ್ದ. ಕಾಲ ಕ್ರಮೇಣ ರಾತ್ರಿ ವೇಳೆ ಮದ್ಯ ತಂದು ಕುಡಿದು ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಇದೇ ತಿಂಗಳು(ಜುಲೈ) 5 ರಂದು ರಾತ್ರಿ ವಿಶ್ವನಾಥ ತನ್ನ ಸಹಚರರನ್ನು ಕರೆಸಿಕೊಂಡು ಮನೋಹರ್ ಮನೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು.
ಉಂಡೂ ಹೋದ ಕೊಂಡೂ ಹೋದ..
ಇದಾದ ಮಾರನೇ ದಿನ ಮನೆಯಲ್ಲಿಟ್ಟ 57 ಸಾವಿರ ರೂ ಹಣವನ್ನು ಮನೋಹರ್ ನೋಡಿದಾಗ ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿಶ್ವನಾಥ್ಗೆ ಪ್ರಶ್ನಿಸಿದರೆ 'ನಾನು ಹಣ ಕದ್ದಿಲ್ಲ, ರಾತ್ರಿ ಬಂದಿದ್ದ ಸ್ನೇಹಿತರನ್ನು ವಿಚಾರಿಸುವೆ. ಒಂದು ವೇಳೆ ಹಣ ಕಳ್ಳತನ ಮಾಡಿದ್ದರೆ, ನಾನೇ ಕೊಡುವೆ' ಎಂದು ಸ್ನೇಹಿತನಿಗೆ ಭರವಸೆ ನೀಡಿದ್ದ.
ಕಳ್ಳತನದ ಬಳಿಕ ಹಲ್ಲೆಗೆ ಸ್ಕೆಚ್..
ಜುಲೈ 8 ರಂದು ವಿಶ್ವನಾಥ್ ಕರೆ ಮಾಡಿ ನಿನ್ನ ಮನೆಯಲ್ಲಿ ಹಣ ಕಳ್ಳತನ ಮಾಡಿದವನು ಸಿಕ್ಕಿಬಿದ್ದಿದ್ದಾನೆ. ಹಣ ನನ್ನ ಹತ್ತಿರವಿದೆ. ಆಂಧ್ರಹಳ್ಳಿಯ ಮುಖ್ಯರಸ್ತೆ ಬಳಿಯ ಹೊಟೇಲ್ ಬಳಿ ಬಾ ಎಂದು ಮನೋಹರ್ಗೆ ಹೇಳಿದ್ದಾನೆ. ಇದರಂತೆ ಮನೋಹರ್ ಹೋಟೆಲ್ ಬಳಿ ಹೋಗಿದ್ದಾನೆ.
ವಿಶ್ವನಾಥ್, ಆರು ಮಂದಿ ಸಹಚರರ ಜೊತೆಗೆ ಒಟ್ಟಿಗೆ ಡ್ರಿಂಕ್ಸ್ ಮಾಡಿದ್ದಾರೆ. ಎಲ್ಲಾ ಮುಗಿದ ಬಳಿಕ ಆರೋಪಿ ವಿಶ್ವನಾಥ್, ಮನೆಯಲ್ಲಿ ದುಡ್ಡು ಕಳ್ಳತನ ಮಾಡಿದ್ದೀಯಾ ಅಂತಾ ಸುಳ್ಳು ಹೇಳುತ್ತಿಯಾ ಎಂದು ಅವಾಚ್ಯ ಶಬ್ಧಗಳಿಂದ ಮನೋಹರ್ಗೆ ನಿಂದಿಸಿ ಅಲ್ಲಿಂದ ರೂಂವೊಂದಕ್ಕೆ ಕರೆದುಕೊಂಡು ಹೋಗಿ ಸುತ್ತಿಗೆ, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ.
ನಡೆಯಿತು ಕುತಂತ್ರ..
ಬಳಿಕ ಮನೆಯಲ್ಲಿರುವ ಕಾರು, ಬೈಕ್ ಸೇರಿದಂತೆ ಸೇಲ್ ಮಾಡಿರುವುದಾಗಿ ಪತ್ರವೊಂದಕ್ಕೆ ಸಹಿ ಮಾಡುವಂತೆ ಬೆದರಿಕೆ ಹಾಕಿದ್ದರು. ಬಳಿಕ ಆರೋಪಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಸದ್ಯ ಗಂಭೀರ ಗಾಯಗೊಂಡಿರುವ ಮನೋಹರ್, ಎಡಗೈ ಹಾಗೂ ಬೆನ್ನಿಗೆ ತೀವ್ರ ಸ್ವರೂಪದ ಗಾಯವಾಗಿದೆ.
ಅಸಲಿ ಚಿತ್ರಣಕ್ಕೆ ಪೊಲೀಸ್ ತನಿಖೆ..
ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.