ಬೆಂಗಳೂರು: ಖಾಕಿ ಚಡ್ಡಿ ಸುಡುವ ಮೂಲಕ ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧ ಪ್ರತಿಭಟನೆ ನಡೆಸಿ ಗೃಹಸಚಿವರ ಮನೆಗೆ ಮುತ್ತಿಗೆ ಹಾಕಲು ಹೊರಟ ವೇಳೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸೇರಿದಂತೆ ಎನ್‌ಎಸ್‌ಯುಐ ಕಾರ್ಯಕರ್ತರನ್ನು ನಗರದಲ್ಲಿ ಪೊಲೀಸರು ವಶಕ್ಕೆ ಪಡೆದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಹಾಗೂ ಕಾರ್ಯಕರ್ತರು ತಿಪಟೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಖಾಕಿ ಚಡ್ಡಿಯನ್ನು ಸುಟ್ಟಿದ್ದರು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಮತ್ತಿತರರು ನಗರದ ಫ್ರೀಡಂ ಪಾರ್ಕ್ ಬಳಿ ಶನಿವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿ ಸುಡಲಾಗುವುದು: ಆರ್‌ಎಸ್‌ಎಸ್ ಚಡ್ಡಿ ಸುಟ್ಟು ಪ್ರತಿಭಟನೆ ಮಾಡಿದ ಕಾರಣಕ್ಕೆ ಎನ್‌ಎಸ್‌ಯುಐ ಅಧ್ಯಕ್ಯ ಕೀರ್ತಿ ಗಣೇಶ್ ಮತ್ತಿತರರನ್ನು ಬಂಧಿಸಿದ್ದಿರಿ. ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ ಅಲ್ವಾ?, ಎಲ್ಲಾ ಜಿಲ್ಲೆಗಳಲ್ಲೂ ಖಾಕಿ ಚಡ್ಡಿಗಳನ್ನು ಸುಡುತ್ತೇವೆ. ಅಲ್ಲದೇ, ನಾವು ಗೃಹ ಸಚಿವರ ಮನೆಯನ್ನು ಮುತ್ತಿಗೆ ಹಾಕುತ್ತೇವೆ. ಇದನ್ನೆಲ್ಲಾ ತಡೆಯಲು ನೀವು ಎಷ್ಟು ಜನರನ್ನು ಬಂಧನ ಮಾಡ್ತೀರಾ ನೋಡೋಣ ಎಂದು ನಲಪಾಡ್ ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಡಿಸಿದರು.
ನಾಡಗೀತೆ ಅರ್ಧಕ್ಕೆ ನಿಲ್ಲಿಸಿದ ನಾಯಕರು: ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಹೊರಡುವ ಮುನ್ನ ಫ್ರೀಡಂ ಪಾರ್ಕ್‌ನಲ್ಲಿ ನಾಡಗೀತೆಯನ್ನು ಕಾಂಗ್ರೆಸ್ ನಾಯಕರು ಹಾಡಿದರು. ಈ ವೇಳೆ ಅರ್ಧ ನಾಡಗೀತೆಯನ್ನ ಮಾತ್ರ ಹಾಡಲಾಗಿದ್ದು, ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಕೈ ನಾಯಕರ ಮೇಲೂ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ?: ಕಾಂಗ್ರೆಸ್ ಟ್ವೀಟೇಟು