ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಬೆಂಗಳೂರು ನಗರ ಕ್ಷೇತ್ರಕ್ಕೆ ವೀಕ್ಷಕರ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಡಿ.10ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದೆ. ಆ ಪ್ರಯುಕ್ತ, ಬೆಂಗಳೂರು ನಗರ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಲಾಗಿದೆ. ಒಟ್ಟು 25 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗಳ ಬಗ್ಗೆ ಬೆಂಗಳೂರು ನಗರ ಸಹ ಒಂದು ಕ್ಷೇತ್ರವಾಗಿದ್ದು, ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಸಚೇತಕರಾಗಿರುವ ನಾರಾಯಣಸ್ವಾಮಿ ಅಧಿಕಾರ ಅವಧಿ ಪೂರ್ಣಗೊಳ್ಳುವ ಹಿನ್ನೆಲೆ ಈ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
2023 ವಿಧಾನಸಭೆ ಚುನಾವಣೆಯಲ್ಲಿ ಕೆಆರ್ ಪುರ ಕ್ಷೇತ್ರದಿಂದ ಸ್ಪರ್ಧಿಸುವ ಆಶಯ ಹೊಂದಿರುವ ನಾರಾಯಣಸ್ವಾಮಿ ಮರು ಆಯ್ಕೆಗಾಗಿ ಕಣಕ್ಕಿಳಿದಿಲ್ಲ. ಇವರ ಬದಲು ಉದ್ಯಮಿ ಯೂಸುಫ್ ಶರೀಫ್ (ಕೆಜಿಎಫ್ ಬಾಬು) ಅವರನ್ನ ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ.
ಚುನಾವಣೆ ಪ್ರಚಾರದ ಮೇಲ್ವಿಚಾರಣೆಯನ್ನು ನಾರಾಯಣಸ್ವಾಮಿ ಅವರಿಗೆ ವಹಿಸಲಾಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಹನುಮಂತರಾಯಪ್ಪ, ಯಶವಂತಪುರ ವ್ಯಾಪ್ತಿಗೆ ಮಾಜಿ ಸಭಾಪತಿ ವಿಆರ್ ಸುದರ್ಶನ್, ಮಹದೇವಪುರ ವ್ಯಾಪ್ತಿಗೆ ಶಾಸಕ ಭೈರತಿ ಬಸವರಾಜ್ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ನಿಯೋಜಿತ ವೀಕ್ಷಕರು ತಮಗೆ ವಹಿಸಿದ ವಿಧಾನಸಭಾ ಕ್ಷೇತ್ರಕ್ಕೆ ತಕ್ಷಣವೇ ತೆರಳಿ ಮತದಾರರನ್ನು ಸೆಳೆಯಬೇಕು. ಪಕ್ಷದ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಹಿರಿಯ ನಾಯಕರು ಹಾಗೂ ಪಕ್ಷದ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಚುನಾವಣೆ ಮುಗಿಯುವವರೆಗೂ ಕ್ಷೇತ್ರದಾದ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
(ಇದನ್ನೂ ಓದಿ: ಇದೆಂಥಾ ಯಡವಟ್ಟು.. ವರ್ಷದ ನಂತ್ರ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್ ರೋಗಿಗಳ ಕೊಳೆತ ಮೃತದೇಹ ಪತ್ತೆ!!)