ಬೆಂಗಳೂರು : ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಜೆಡಿಎಸ್ ಶಾಸಕರಿಗೆ ಬಿಡಿಗಾಸು ಅನುದಾನ ಕೊಟ್ಟಿಲ್ಲ ಎಂದು ಜೆಡಿಎಸ್ ಸದಸ್ಯ ಹೆಚ್.ಡಿ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಿಯಮ 69ರಡಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀರಾವರಿ ಇಲಾಖೆ ಸೇರಿದಂತೆ ಇತರೆ ಇಲಾಖೆಯಲ್ಲಿನ ಅಭಿವೃದ್ಧಿ ಯೋಜನೆಗೆ ಹಿಂದಿನ ಸರ್ಕಾರಗಳು ನೀಡಿರುವ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ನೀಡಿದೆ.
ಕಾವೇರಿ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿನ ಜಿಲ್ಲೆಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಾರ್ಯಾದೇಶ ನೀಡುವ ವೇಳೆ ತಡೆಯಾಜ್ಞೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1277 ಕೋಟಿ ರೂ. ಅನುದಾನ ನೀಡಿದ್ದರು. 30 ಜಿಲ್ಲೆಗಳಿಗೆ ಹಣಕಾಸು ಒದಗಿಸಲಾಗಿತ್ತು. ಆದರೆ, ಇದರಲ್ಲಿ ಜೆಡಿಎಸ್ ಶಾಸಕರಿಗೆ ಬಿಡಿಗಾಸು ಅನುದಾನ ಕೊಟ್ಟಿಲ್ಲ. ಜೆಡಿಎಸ್ ಪ್ರತಿಭಟನೆ ನಡೆಸಿದ ನಂತರ ರಾಜಕೀಯ ದ್ವೇಷ ಇಲ್ಲದಂತೆ ಅನುದಾನ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದ್ದರು. ಅನುದಾನ ತಾರತಮ್ಯಗಳನ್ನು ನಿವಾರಣೆ ಮಾಡುವುದಾಗಿಯೂ ತಿಳಿಸಿದ್ದರು. ಆದರೆ, ಅವರ ಪಕ್ಷದಲ್ಲಿನ ಬೆಳವಣಿಗೆಯಿಂದಾಗಿ ಅವರೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿದರು ಎಂದರು.
ರಾಜ್ಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯು ಖಾಸಗಿಯವರ ಹಿಡಿತದಲ್ಲಿದ್ದರೆ, ಇಲಾಖೆಯು ಹಾಳಾಗಲಿದೆ. ಶಿಕ್ಷಣ ಇಲಾಖೆ ಸೊರಗುವಂತಾಗಿದೆ. 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದರೂ ಸರ್ಕಾರಿ ಶಾಲಾ-ಕಾಲೇಜುಗಳು ಅವ್ಯವಸ್ಥೆಯಲ್ಲೇ ಇವೆ. ಖಾಸಗಿ ಶಿಕ್ಷಣಗಳಿಗೆ ಸರಿಸಮಾನವಾಗಿ ಸರ್ಕಾರಿ ಶಾಲೆಯಲ್ಲಿ ಕೊಡುವ ಉದ್ದೇಶದಿಂದ ಹೆಚ್.ಡಿ.ಕುಮಾರಸ್ವಾಮಿ ಆಡಳಿತವಧಿಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿದೆ. ಉಳ್ಳವರ ಮಕ್ಕಳು ಮಾತ್ರ ಆಂಗ್ಲಭಾಷೆ ಕಲಿಯುವುದಲ್ಲ, ಬಡವರ, ರೈತರ ಮಕ್ಕಳು ಸಹ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು. ಹೀಗಾಗಿ ಶಾಲಾ-ಕಾಲೇಜುಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಕೈಯಾಡಿಸಿ ಅಭ್ಯಾಸ ಇಲ್ಲ. ರಾಜ್ಯದ ಮಕ್ಕಳು ವಿದ್ಯಾವಂತರಾಗಬೇಕು. ದುಡ್ಡು ಬರುವ ಕೆಲಸಕ್ಕೆ ಕೈ ಹಾಕಿಲ್ಲ ಎಂದು ಹೇಳಿದಾಗ ಸದನದಲ್ಲಿ ಹಲವು ಸದಸ್ಯರು ಕಿರುನಗೆ ಮೂಡಿಸಿದರು. ಹಾಸನ ಜಿಲ್ಲೆಯಲ್ಲಿನ ಎಂಜಿನಿಯರಿಂಗ್ ಕಾಲೇಜಿಗೆ ವಸತಿ ನಿಲಯ ಕಲ್ಪಿಸಿಕೊಡಬೇಕು. ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಯಿಂದ ಕಾಲೇಜಿಗೆ ಬಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಹೀಗಾಗಿ ವಸತಿ ನಿಲಯ ನೀಡಬೇಕು ಎಂದು ಹೇಳಿದರು.
ಯಡಿಯೂರಪ್ಪ ಹಾಡಿ ಹೊಗಳಿದ ರೇವಣ್ಣ : ರಾಜ್ಯದಲ್ಲಿ ಪ್ರಗತಿ ಹಂತದಲ್ಲಿರುವ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸುವ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಅವರು ಹಲವು ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಗಳಿದರು.
ಅನುದಾನ ನೀಡುವ ವಿಚಾರದಲ್ಲಿ ಜೆಡಿಎಸ್ ಶಾಸಕರಿಗೂ ನೀಡುವಲ್ಲಿ ಯಡಿಯೂರಪ್ಪ ಅವರು ಅಶ್ವಾಸನೆ ನೀಡಿದ್ದರು. ರಾಜಕೀಯ ದ್ವೇಷ ಮಾಡುತ್ತಿರಲಿಲ್ಲ. ಅಲ್ಲದೇ, ಕೋವಿಡ್‌ನಿಂದ ಮೃತಪಟ್ಟ ರೈತ ಕುಟುಂಬಕ್ಕೆ ಒಂದು ಲಕ್ಷ ರೂ. ನೀಡಿದ್ದರು. ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಯಡಿಯೂರಪ್ಪ ಅವರು ಪತ್ರ ಬರೆದಿದ್ದರು. ಹಲವು ಕಾರ್ಯಗಳನ್ನು ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ, ಅಷ್ಟೊತ್ತಿಗೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಬಿಜೆಪಿಯಲ್ಲಿ ಅವರ ಪರಿಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಎರಡು ವರ್ಷಗಳ ಕಾಲ ತಳ್ಳಿದರು. ಬೇರೆಯವರಾಗಿದ್ದರೆ ಅಷ್ಟೂ ಸಮಯ ಇರುತ್ತಿರಲಿಲ್ಲ ಎಂದರು.
ಸದನದಲ್ಲಿ ಮಂಡ್ಯ ಜಿಲ್ಲೆಯ ಗಣಿಗಾರಿಕೆ ಪ್ರತಿಧ್ವನಿ : ಮಂಡ್ಯ ಜಿಲ್ಲೆಯ ಗಣಿಗಾರಿಕೆ ರಾಜಕೀಯ ವಿಚಾರವು ಸದನದಲ್ಲಿ ಪ್ರತಿಧ್ವನಿಸಿದ್ದು, ಜೆಡಿಎಸ್ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರು ಮಂಡ್ಯ ಜಿಲ್ಲೆಯಲ್ಲಿ ಪ್ರತ್ಯೇಕ ಗಣಿಗಾರಿಕೆ ಕಾನೂನು ಇದೆ. ರಾಜ್ಯಕ್ಕೆ ಅನ್ವಯವಾಗುವಂತೆ ಕಾನೂನು ತರಬೇಕು ಎಂದು ಆಗ್ರಹಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ವಿಚಾರ ಸಂಬಂಧ ಪ್ರತ್ಯೇಕ ಕಾನೂನು ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಸರ್ಕಾರವು ಗಮನಹರಿಸಬೇಕು. ರಾಜ್ಯಕ್ಕೆ ಅನ್ವಯಿಸುವಂತೆ ಕಾನೂನು ಮಾಡಬೇಕು ಎಂದು ಹೇಳಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡಲಾಗಿದ್ದು, ರೈತರು ಕಬ್ಬು ಎಲ್ಲಿ ಸಾಗಿಸಬೇಕು ಎಂಬ ಚಿಂತೆಗೀಡಾಗಿದ್ದಾರೆ. ಈ ಬಗ್ಗೆ ಸರ್ಕಾರವು ಸೂಕ್ತ ಕ್ರಮ ಕೈಗೊಂಡು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದರಿಂದಲೇ ನಾನು ಎರಡು ಬಾರಿ ವಿಧಾನಸಭೆಗೆ ಬಂದಿದ್ದೇನೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ