ಮಹದೇವಪುರ(ಬೆಂಗಳೂರು): ಮಹದೇವಪುರದ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಅರವಿಂದ ಲಿಂಬಾವಳಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಟ್ರಾಕ್ಟರ್‌ನಲ್ಲಿ ಸಂಚರಿಸಿ ಹಾನಿ ಪ್ರದೇಶ ವೀಕ್ಷಿಸಿದರು. ಯಮಲೂರು, ಗುರುರಾಜ ಬಡಾವಣೆ, ಬೋರ್ ವೆಲ್ ರಸ್ತೆ ಹಾಗೂ ಹಲವು ಮನೆಗಳಿಗೆ ನೀರು ನುಗ್ಗಿರುವ ಮತ್ತು ರಾಜಕಾಲುವೆಗಳ ಒತ್ತುವರಿ ಪ್ರದೇಶಗಳಿಗೆ ಅವರು ಭೇಟಿ ನೀಡಿದರು.
ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಪರಿಹಾರ ಮತ್ತು ನಿವಾಸಿಗಳಿಗೆ ಊಟ, ನೀರು ಹಾಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ತಮ್ಮ ಮುಖಂಡರಿಗೆ ಮತ್ತು ಪಾಲಿಕೆ, ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ಬಳಿಕ ಮಾತನಾಡಿದ ಅವರು, ವಾಡಿಕೆಗಿಂತ ಈ ಬಾರಿ ಅತಿ ಹೆಚ್ಚು ಮಳೆಯಾಗಿದೆ. ಅದರಲ್ಲಿಯೂ ಮಹದೇವಪುರ ವಲಯದಲ್ಲಿ ಹೆಚ್ಚಿನ ಮಳೆಯಾಗಿದೆ. ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ತಂಡಗಳು ಕೆಲಸ ಮಾಡುತ್ತಿವೆ. ಸಮಸ್ಯೆಯಲ್ಲಿ ಸಿಲುಕಿದ್ದವರಿಗೆ ಕುಡಿಯುವ ನೀರು, ಆಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಂಗಳೂರಿನ ಸುಮಾರು ಅರ್ಧ ಭಾಗದಿಂದ ಬರುವ ನೀರು ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆ ಮಾರ್ಗವಾಗಿ ಹರಿಯುತ್ತದೆ. ಕಾಲುವೆಗಳಲ್ಲಿ ಹರಿದು ಹೆಚ್ಚಿನ ಪ್ರಮಾಣದ ನೀರು ಉಕ್ಕಿ ತಗ್ಗು ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗಿದೆ. ಸದ್ಯ ನೀರನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿರುವುದರಿಂದ ಸಮಸ್ಯೆಯಾಗಿದೆ. ಒತ್ತುವರಿ ತೆರವು ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಜಲಾವೃತವಾದ ಲೇಔಟ್ಗಳು.. ಮನೆ ಖಾಲಿ ಮಾಡಿ ಹೋಟೆಲ್, ಲಾಡ್ಜ್ ಸೇರಿದ ಬೆಂಗಳೂರಿಗರು