ಬೆಂಗಳೂರು: ಕೊರೊನಾ ಮೊದಲನೇ ಅಲೆಯನ್ನು ತಬ್ಲಿಘಿಗಳು ಹಬ್ಬಿಸಿದರೆ, ಮೂರನೇ ಅಲೆಯನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ಆರೋಪಿಸಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಕೊರೊನಾ ಹಬ್ಬಿಸುವ ಪಾದಯಾತ್ರೆ ನಡೆಸುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನಾವು ಕಟಿಬದ್ಧರಾಗಿದ್ದೇವೆ. ರಾಜ್ಯದಲ್ಲಿ ಕೊರೊನಾ ಹರಡಿದರೆ ಅದಕ್ಕೆ ಕಾಂಗ್ರೆಸ್ ಕಾರಣ. ಈ ನೆಲದ ಕಾನೂನನ್ನು ಕಾಂಗ್ರೆಸ್ ಗೌರವಿಸುವುದಿಲ್ಲ. ಲಸಿಕೆ ಬಂದಾಗ ಆರಂಭದಲ್ಲಿ ಲಸಿಕೆಯನ್ನು ತಿರಸ್ಕರಿಸಿದರು. ಈಗ ನೀರಿನ ಹೆಸರಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಇದು ನೀರಿಗಾಗಿ ಅಲ್ಲ, ಪಕ್ಷದ ಮುಂದಿನ ನಾಯಕತ್ವದ ಪ್ರದರ್ಶನಕ್ಕಾಗಿ ಈ ಪಾದಯಾತ್ರೆ ಎಂದು ಕಿಡಿಕಾರಿದರು.
ಸರ್ಕಾರವೇ ಕೋವಿಡ್ ಅಂಕಿ-ಅಂಶ ಹೆಚ್ಚು ಮಾಡುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅಂಕಿ ಅಂಶದ ಮೇಲೆ ನಂಬಿಕೆ ಇಲ್ಲ. ಪಾದಯಾತ್ರೆ ಮಾಡುವ ಎಷ್ಟು ಜನರಿಗೆ ಪಾಸಿಟಿವ್ ಬಂತು?. ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಇಲ್ಲ. ಸಲಹೆ ಕೊಡಬೇಕಿದ್ದ ನಾಯಕರೇ ಮಕ್ಕಳ ಜೊತೆ ಸಭೆ ನಡೆಸಿ ಕೊರೊನಾ ಹಬ್ಬುವಂತೆ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕ್ರಮ ದೊಡ್ಡ ವಿಚಾರವಲ್ಲ, ಅವರೇ ಅರಿತುಕೊಳ್ಳಲಿ..
ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳದಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿಯಮಾವಳಿಗಳು ಎಲ್ಲರಿಗೂ ಒಂದೇ. ಮೊಕದ್ದಮೆ, ಬಂಧನ ಮಾಡುವುದು ದೊಡ್ಡ ವಿಷಯ ಅಲ್ಲ. ಸರ್ಕಾರ ನಡೆಸಿದವರು ಅರ್ಥ ಮಾಡಿಕೊಳ್ಳಬೇಕು. ಆಗಿದ್ದ ಕಾಳಜಿ ಈಗ ಯಾಕೆ ವಿಪಕ್ಷಗಳಿಗೆ ಇಲ್ಲ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜಸ್ಥಾನ, ತಮಿಳುನಾಡು, ಕೇರಳದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಇದೆ. ಬಂಧನ ಮಾಡುವುದು ದೊಡ್ಡದಲ್ಲ. ಮಾಜಿ ಸಿಎಂ ಅವರಿಗೆ ಕಾನೂನಿನ ಅರಿವಿರಬೇಕು. ಅವರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು.
ಇದು ಕೋವಿಡ್ ಯಾತ್ರೆ
ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದರೆ ಕಾಂಗ್ರೆಸ್ ಕಾರಣ. ಈ ರೀತಿ ರಾಜಕೀಯ ಮೇಲಾಟವನ್ನು ಕಾಂಗ್ರೆಸ್ ಬಿಡಬೇಕು. ಇದರ ಮರುಚಿಂತನೆಯನ್ನು ಆ ಪಕ್ಷದ ನಾಯಕರು ಮಾಡಬೇಕು. ಇದು ಕೋವಿಡ್ ಯಾತ್ರೆ. ಕೋವಿಡ್ ವಿಸ್ತರಣೆ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.
ನೆಲದ ಕಾನೂನನ್ನು ಗೌರವಿಸದ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ತಬ್ಲಿಘಿಗಳ ಮೇಲೆ ಬಂದ ಆರೋಪ ಕಾಂಗ್ರೆಸ್ ಮೇಲೆ ಬರುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು. ಅವರ ವಿರುದ್ಧ ಕ್ರಮ ಕೈಗೊಳ್ಳುವುದು ದೊಡ್ಡ ವಿಚಾರವಲ್ಲ. ಆದರೆ ಅವರಿಗೇ ಅವರ ಹೊಣೆಗಾರಿಕೆ ಗೊತ್ತಿರಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಶತಪ್ರಯತ್ನ, ಬಿಜೆಪಿ ಕಾರ್ಯ ಶೂನ್ಯ: ಎಂ.ಬಿ.ಪಾಟೀಲ್