ಬೆಂಗಳೂರು: ಹೆಚ್ಎಎಲ್ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಅಲ್ಲಿ ದಾಖಲಾಗಿರುವ ಲಕ್ಷಣರಹಿತ ಕೋವಿಡ್ ರೋಗಿಗಳ ಆರೋಗ್ಯದ ಕುರಿತು ವೈದ್ಯರ ಜೊತೆ ಸಮಾಲೋಚಿಸಿದರು. ಈ ವೇಳೆ ಕೋವಿಡ್ ನಿರ್ವಹಣೆಗೆ ಹೆಚ್ಎಎಲ್ನಿಂದ ಎರಡು ಆ್ಯಂಬುಲೆನ್ಸ್ ಕೊಡುಗೆ ನೀಡಲಾಗಿದೆ. ಈ ವೇಳೆ, ಸಚಿವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಸುಧಾಕರ್, ಬೆಂಗಳೂರಲ್ಲಿ ಹನ್ನೊಂದು ಕೋವಿಡ್ ಕೇರ್ ಸೆಂಟರ್ಗಳಿವೆ. ಶೇ. ಇಪ್ಪತ್ತರಷ್ಟು ಬೆಡ್ ಖಾಲಿ ಇವೆ. ಹೆಚ್ಎಎಲ್ ಸಿಸಿಸಿ ಕೇಂದ್ರದಲ್ಲಿ ಇನ್ನೂರು ಬೆಡ್ ಸೌಲಭ್ಯ ಇದೆ. ಹೆಚ್ಎಎಲ್ ಸಂಸ್ಥೆಯು ಬೌರಿಂಗ್ ಕಾಲೇಜಿಗೆ ಎರಡು ಆ್ಯಂಬುಲೆನ್ಸ್ ದೇಣಿಗೆ ಕೊಟ್ಟಿದ್ದಾರೆ ಎಂದರು.
ಹತ್ತು ದಿನದಲ್ಲಿ ಸಿಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್
ಸಿಎಂ ಯಡಿಯೂರಪ್ಪ ಆರೋಗ್ಯ ವಿಚಾರವಾಗಿ ಮಾತನಾಡಿದ ಅವರು, ಮಣಿಪಾಲ್ ಆಸ್ಪತ್ರೆ ವೈದ್ಯರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಸಿಎಂ ನಾರ್ಮಲ್ ಆಗಿದ್ದು, ಆರೋಗ್ಯವಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೊನ್ನೆ ಜ್ವರ ಇತ್ತು. ಈಗ ಅವರಿಗೂ ಜ್ವರ ಕಡಿಮೆಯಾಗಿದ್ದು, ಇಬ್ಬರ ಬಗ್ಗೆ ವೈದ್ಯರ ತಂಡ ನಿಗಾವಹಿಸಿದೆ ಎಂದರು. ಸಿದ್ದರಾಮಯ್ಯಗೆ ಮೊನ್ನೆ 104 ಡಿಗ್ರಿ ಜ್ವರ ಇತ್ತು. ನಿನ್ನೆ 99 ಡಿಗ್ರಿಗೆ ಬಂದಿದೆ. ಸಾಮಾನ್ಯವಾಗಿ ಹತ್ತು ದಿನ ಆಸ್ಪತ್ರೆಯಲ್ಲಿ ಇರಬೇಕು. ಆದ್ರೆ ಕೊನೆಯ ಮೂರು ದಿನ ಲಕ್ಷಣ ಕಂಡು ಬರದಿದ್ರೆ ಡಿಸ್ಚಾರ್ಜ್ ಆಗಬಹುದು ಎಂದರು.
ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಸ್ವಾತಂತ್ರ ದಿನದಂದು ಸಿಎಂ ಭಾಗಿಯಾಗುವ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ಯೋಧರಿಗೆ ಕೆಲ ನಿಯಮ ಸಡಿಲ ಮಾಡಲಾಗಿದೆ. ಮುಖ್ಯಮಂತ್ರಿಗಳೂ ಈ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತಾರೆ. ಹತ್ತು ದಿನಗಳಲ್ಲಿ ರೋಗದ ಲಕ್ಷಣ ಕಂಡುಬರದಿದ್ದರೆ ಸಿಎಂ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಆಗಸ್ಟ್ 15, ಇನ್ನೂ ದೂರ ಇದೆ ಎಂದರು.
ರಾಜ್ಯದಲ್ಲಿ ಮಳೆ ನಿರ್ವಹಣೆಗೆ ಅಧಿಕಾರಿಗಳ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮಳೆಯಿಂದಾಗಿ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದು, ಈಗ ಮಳೆ ಹಾನಿ ಪ್ರದೇಶಲ್ಲೂ ಕೆಲಸ ಮಾಡಬೇಕು. ನಮ್ಮ ಅಧಿಕಾರಿಗಳು ಸಮರ್ಥವಾಗಿ ಎರಡೂ ಕಾರ್ಯಗಳನ್ನು ಮಾಡುವ ವಿಶ್ವಾಸ ಇದೆ. ಈಗಾಗಲೇ ಮಳೆ ಪೀಡಿತ ಪ್ರದೇಶಗಳಲ್ಲಿ ಹಾನಿ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸಿಎಂ ಅನುಪಸ್ಥಿತಿಯಲ್ಲಿ ಸಭೆ ನಡೆಸಿ, ಸೂಚನೆ ಕೊಟ್ಟಿದ್ದಾರೆ ಎಂದರು.