ಬೆಂಗಳೂರು : ದಿಲ್ಲಿಯಲ್ಲಿ ಹೇಗೆ ಕಾಂಗ್ರೆಸ್ ಹಿರಿಯ ಮುಖಂಡರ ಜಿ-23 ಪ್ರತ್ಯೇಕ ಬಣ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕೆ-23 ಬಣಕ್ಕೆ ನಟಿ ರಮ್ಯ ಮುಹೂರ್ತ ಫಿಕ್ಸ್ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರುಗಳ ಮಧ್ಯೆದ ಟ್ವಿಟರ್ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಹೊಂದಾಣಿಕೆ ಇಲ್ಲ. 224 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಆಗಲೇ ಟವೆಲ್ ಹಾಕಲು ಶುರು ಮಾಡಿದ್ದಾರೆ. ಆ ಟವೆಲ್ ಹಾಕಲು ಹೊರಟಿರುವುದರಿಂದಲೇ ಜಗಳ ಶುರುವಾಗಿದೆ. ಒಂದು ಕಡೆ ಜಮೀರ್ ಬಣ, ಇನ್ನೊಂದು ಕಡೆ ರಮ್ಯಾ ಎಂದು ಟೀಕಿಸಿದರು.
ದಿಲ್ಲಿಯಲ್ಲಿ ಕಾಂಗ್ರೆಸ್ನಲ್ಲಿ ಜಿ-23 ಭಿನ್ನಮತೀಯರ ಗ್ಯಾಂಗ್ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕೆ-23 ಭಿನ್ನಮತೀಯರ ಗ್ಯಾಂಗ್ ಪ್ರಾರಂಭವಾಗುತ್ತಿದೆ. ಅದಕ್ಕೆ ಕುಮಾರಿ ರಮ್ಯಾ ಮುಹೂರ್ತ ಇಡಲಿದ್ದಾರೆ. ರಮ್ಯಾ, ಎಂ.ಬಿ.ಪಾಟೀಲ್ ಪರ ಒಂದು ಟೀಂ, ಡಿಕೆಶಿ ನಲಪಾಡ್ ಪರ ಮತ್ತೊಂದು ಟೀಂ ಆಗಿದೆ. ಕಾಂಗ್ರೆಸ್‌ನ ಗುಂಪುಗಳ ಬಯಲಾಟ ಇದು. ಆ ಗುಂಪುಗಳ ಬಯಲಾಟ ಈಗ ಬೀದಿಗೆ ಬಂದಿದೆ ಎಂದರು.
ಕಾಂಗ್ರೆಸ್‌ನ ಬೇಗುದಿ ಹೊಗೆ ಆಡ್ತಿತ್ತು ಇಷ್ಟು ದಿನ. ಈಗ ಆ ಬೇಗುದಿ ಬೆಂಕಿ ಉಗುಳ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಹಾಗೆ ಟ್ವೀಟ್ಗಳು ಮಿಸೈಲ್ ಥರ ಮಾಡ್ತಿದಾರೆ. ನೀನೇ ಸಾಕಿದಾ ಗಿಳಿ ಎಂಬಂತೆ ಅವರ ಅಧ್ಯಕ್ಷ ವಿರುದ್ಧವೇ ಬಂಡಾಯ ಸಾರಿದೆ. ರಮ್ಯಾಜಿ ಅವರು ಈಗ ಫೀಲ್ಡ್ಗೆ ಇಳಿದಿದ್ದಾರೆ. ಡಿಕೆಶಿ- ಸಿದ್ದರಾಮಯ್ಯ ಸಂಘರ್ಷದಿಂದ ಈಗಾಗಲೇ ಮನೆಯೊಂದು ಎರಡು ಬಾಗಿಲು ಅಂತಾ ಇತ್ತು. ರಮ್ಯಾ ಬಂದು ಮೂರನೇ ಬಾಗಿಲು ತೆರೆದಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯ ಆಗಿದೆ. ಅಲ್ಲಿ ಜಿ23 ಟೀಂ ಅಧ್ಯಕ್ಷರಿಗೇ ಸವಾಲು ಹಾಕಿದೆ. ಇಲ್ಲೂ ಅಧ್ಯಕ್ಷರ ವಿರುದ್ಧ ಬಂಡಾಯ ಸಾರಿದ್ದಾರೆ. ಈಗ ರಮ್ಯಾ ಅವರು ಟ್ವೀಟ್ ಮೂಲಕ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಪಕ್ಷದಲ್ಲಿ ರಮ್ಯಾ ಸ್ಥಾನಮಾನ ಏನೆಂಬುದು ನನಗೆ ಗೊತ್ತಿಲ್ಲ: ನಲಪಾಡ್