ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಹಣವನ್ನು ಈ ತಿಂಗಳ ಅಂತ್ಯದೊಳಗೆ ಪಾವತಿಸಬೇಕೆಂದು ಸರ್ಕಾರ ಗಡುವು ನೀಡಿದೆ. ಕಳೆದ ವರ್ಷ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಬಾಕಿ ಹಣ ನೀಡಿದ್ದರು. ಈ ವರ್ಷ ಇನ್ನೂ ಕಬ್ಬು ಕಟಾವು ನಡೆದಿದೆ. ರಾಜ್ಯದಲ್ಲಿ 621.93 ಮೆ.ಟನ್ ಕಬ್ಬು ನುರಿಸಲಾಗಿದೆ. 19,626 ಕೋಟಿ ರೂ. ರೈತರಿಗೆ ಬಾಕಿ ಕೊಡಿಸಬೇಕಿದೆ. 18,224. ಕೋಟಿ ರೂ. ಈಗಾಗಲೇ ಪಾವತಿ ಮಾಡುವ ಕೆಲಸ ಆಗಿದೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ ಮಾಹಿತಿ ನೀಡಿದರು.
ವಿಕಾಸ ಸೌಧದಲ್ಲಿ ಇಂದು ಕಾರ್ಖಾನೆಯ ಮಾಲೀಕರು ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ಚರ್ಚಿಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸೂಚನೆ ಕೊಟ್ಟ ನಂತರ 400 ಕೋಟಿ ಕೊಟ್ಟಿದ್ದಾರೆ. ಅಂದರೆ ಶೇಕಡಾ 93 ರಷ್ಟು ಹಣವನ್ನು ಕಾರ್ಖಾನೆಯವರು ನೀಡಿದ್ದಾರೆ. ಬಾಕಿ ಶೇ. 7 ಹಣವನ್ನು ಈ ತಿಂಗಳ ಅಂತ್ಯದೊಳಗೆ ನೀಡುವಂತೆ ಸೂಚಿಸಿದ್ದೇವೆ. 1,435 ಕೋಟಿ ಬಾಕಿ ಉಳಿದಿದೆ. ಇಂದಿನ ಸಭೆಯಲ್ಲಿ 200. ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದು ವಿವರಿಸಿದರು.
ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು 50 ಕೋಟಿ ರೂ. ನೀಡಲಾಗಿದೆ. ಬಾಗಲಕೋಟೆಯ ರನ್ನ ಕಾರ್ಖಾನೆಯನ್ನು ನಡೆಸಲು ಖಾಸಗಿಯವರು ಮುಂದೆ ಬಂದಿದ್ದಾರೆ. ಆರ್ಥಿಕ ಸಂಕಷ್ಟದಿಂದ ಹಾಗೂ ಇತರೆ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಬ್ಬು ಬೆಳಗಾರ ರೈತರ ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ, ಮುಧೋಳ ಮತ್ತು ಮೈಸೂರಿನ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ, ಕೆ.ಆರ್.ನಗರ ಈ ಎರಡು ಕಾರ್ಖಾನೆಗಳನ್ನು ಖಾಸಗಿಯವರಿಗೆ ದೀರ್ಘಾವಧಿ ಮೇಲೆ ಗುತ್ತಿಗೆ ನೀಡಲಾಗಿದೆ. ಹಂಗಾಮಿನಿಂದ ಕಾರ್ಖಾನೆಗಳು ಕಾರ್ಯ ಪ್ರಾರಂಭಿಸಲಿವೆ ಎಂದು ಹೇಳಿದರು.
ಎಥೆನಾಲ್ ನೀತಿ: ಎಥೆನಾಲ್ ಉತ್ಪಾದನೆಯಿಂದ ರೈತರಿಗೆ ಪಾಲು ನೀಡುವ ಬಗ್ಗೆ ಸಕ್ಕರೆ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಮೈಶುಗರ್ ಕಾರ್ಖಾನೆಗೆ 528. ಕೋಟಿ ರೂ. ನೀಡಲಾಗಿದೆ. ಅದರಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸಕ್ತ ರಾಜ್ಯದಲ್ಲಿ 32 ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದಿಸುತ್ತಿವೆ. ಇದಲ್ಲದೆ ಹೊಸದಾಗಿ ಎಥನಾಲ್ ಸ್ಥಾಪಿಸಲು/ಹಾಲಿ ಇರುವ ಸಾಮರ್ಥ್ಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ 68 ಘಟಕಗಳು ತಾತ್ವಿಕ ಅನುಮೋದನೆಯನ್ನು ಪಡೆದಿರುತ್ತವೆ. ಈ ಸದರಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಉತ್ತೇಜನ ನೀಡುವ ಉದ್ದೇಶ ಹೊಂದಿದ್ದು, ಈ ಸಂಬಂಧ ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ತಾಂತ್ರಿಕ ತಜ್ಞರ ಸಲಹೆ: ಕಬ್ಬು ಮತ್ತು ಸಕ್ಕರೆ ಉದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕಬ್ಬು ನಿಯಂತ್ರಣ ಮಂಡಳಿಯ ಸದಸ್ಯರು ಮತ್ತು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ತಾಂತ್ರಿಕ ತಜ್ಞರನ್ನು ರಾಷ್ಟ್ರದಲ್ಲಿ ಹೆಚ್ಚು ಕಬ್ಬು ಬೆಳೆಯುವ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ. ಸದರಿ ಸಮಿತಿಯು ವರದಿ ಸಲ್ಲಿಸಿದ ನಂತರ ಅಲ್ಲಿನ ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಪರಿಶೀಲಸಲಾಗುವುದು. ನಮ್ಮ ರಾಜ್ಯದಲ್ಲಿಯು ಅಳವಡಿಸಿಕೊಳ್ಳುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.