ಬೆಂಗಳೂರು: ಹಿಂದೂ ಸಂಪ್ರದಾಯವನ್ನು ಹಿಂದುಗಳು ಮಾಡಿಕೊಳ್ಳಲಿ. ಮುಸಲ್ಮಾನ ಸಂಪ್ರದಾಯವನ್ನು ಮುಸಲ್ಮಾನರು ಮಾಡಿಕೊಳ್ಳಲಿ. ನನ್ನ ಅಭಿಪ್ರಾಯದಲ್ಲಿ ಜಟ್ಕಾ ಕಟ್ ರೀತಿಯಲ್ಲಿ ಪ್ರಾಣಿಗಳ ವಧೆಯಾಗಬೇಕು. ವ್ಯಾಪಾರದ ಸಂದರ್ಭದಲ್ಲಿ ಹಿಂದೂ ಸಂಪ್ರದಾಯ ಪಾಲಿಸಿ ಅನ್ನೋದರಲ್ಲಿ ತಪ್ಪೇನಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್, ಜಟ್ಕಾ ಕಟ್ ಅಂದರೆ ಏನು ಅಂತಾನೇ ನನಗೆ ಗೊತ್ತಿರಲಿಲ್ಲ. ಮಾಧ್ಯಮಗಳ ಮೂಲಕ ಗೊತ್ತಾಯಿತು. ಹಿಂದೂ ಸಂಪ್ರದಾಯದಂತೆ ಪ್ರಾಣಿ ಹತ್ಯೆಯಾಗಲಿ ಎಂಬುದು ನನ್ನ ಅಭಿಪ್ರಾಯ. ಆದರೆ, ಮುಸಲ್ಮಾನರಿಗೆ ಒಂದು ಅಭಿಪ್ರಾಯ ಇದೆ. ಅವರು ಅದನ್ನು ನಡೆಸಿಕೊಂಡು ಹೋಗಲಿ, ಇವರು ಇದನ್ನು ನಡೆಸಿಕೊಂಡು ಹೋಗಲಿ. ಮುಸಲ್ಮಾನರು ಹಿಂದೂಗಳ ಬಳಿ ಹೋಗಿ ಮಾಂಸ ಖರೀದಿ ಮಾಡಬೇಡಿ ಅನ್ನೋಕೆ ಅವರಿಗೆ ಹಕ್ಕಿಲ್ಲ ಎಂದರು.
ಸರ್ವಜನಾಂಗದ ಶಾಂತಿಯ ತೋಟ ಎನ್ನುವವರು ಇದನ್ನು ಮುಸಲ್ಮಾನರ ಬಳಿ ಹೋಗಿ ಹೇಳಿದ್ದೀರಾ? ಹರ್ಷನ ಹತ್ಯೆಯಾದಾಗ ಯಾರಾದರೂ ಬಂದು ಇದನ್ನು ಹೇಳಿದ್ರಾ?. ಹತ್ಯೆ ಮಾಡಿದವರ ವಿರುದ್ದ ಕ್ರಮ ಆಗಲಿ ಎಂದು ಯಾರಾದರೂ ಪ್ರಶ್ನೆ ಮಾಡಿದರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಗಳು ಮೇಲೆ ಮಾತ್ರ ಯಾವಾಗಲೂ ಹೇರಿಕೆ ನಡೆಯುತ್ತಲೇ ಇರುತ್ತದೆ. ಮುಸಲ್ಮಾನರು ಏನು ಬೇಕಾದರೂ ಮಾಡಬಹುದಾ? ಕೊನೆಗೆ ಎಲ್ಲರೂ ಬಂದು ಹಿಂದುಗಳಿಗೆ ಮಾತ್ರ ಬುದ್ದಿ ಹೇಳುತ್ತಾರೆ. 23 ಜನ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆದಾಗ ಯಾರಾದರೂ ಬಂದು ಯಾಕೆ ಈ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ಹೆಚ್ಡಿಕೆ ಹೇಳಿಕೆಗೆ ಕೆಂಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಡಸ್ತನದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಗಂಡಸ್ತನ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ. ಒಂದು ಕಡೆ ಬಳಸಬೇಕೋ, ಎರಡು ಕಡೆ ಬಳಸಬೇಕೋ, ಮೂರು ಕಡೆ ಬಳಸಬೇಕೋ ಎಂಬುದು ಅವರಿಗೆ ಗೊತ್ತು. ಮಾಜಿ ಸಿಎಂ ಆದವರು ಇನ್ನೊಬ್ಬ ಸಿಎಂ ಗಂಡಸ್ತನದ ಬಗ್ಗೆ ಪ್ರಶ್ನೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಆಯೋಗ ರಚನೆಗೆ ಸರ್ವಪಕ್ಷ ಸಭೆ ತೀರ್ಮಾನ