ಬೆಂಗಳೂರು: ಹಿಜಾಬ್ ವಿವಾದ ಸದ್ಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಗಾಲು ಹಾಕುತ್ತಿದೆ. ಹಿಜಾಬ್ ಕಿಡಿಗೆ ರಾಜ್ಯ ಸರ್ಕಾರ ಮೂರು ದಿನಗಳ ರಜೆ ಘೋಷಣೆ ಮಾಡಿದೆ. ನಾಳೆಗೆ ಸರ್ಕಾರ ಕೊಟ್ಟ ರಜೆ ಮುಗಿಯುವ ಹಿನ್ನೆಲೆಯಲ್ಲಿ ಮತ್ತೆ ರಜೆ ವಿಸ್ತರಣೆ ಆಗುತ್ತಾ? ಇಲ್ವಾ? ಎಂಬ ಗೊಂದಲ ಮೂಡಿದೆ. ಯಾಕೆಂದರೆ ಹಿಜಾಬ್ ವಿವಾದ ಹೈಕೋರ್ಟ್ನಲ್ಲಿದ್ದು, ಇದು ಇತ್ಯರ್ಥ ಆಗಬೇಕಿದೆ. ಹೀಗಾಗಿ ಇಂದು ತೀರ್ಪು ಬರದೇ ಮುಂದೂಡಿಕೆ ಆದರೆ ರಜೆ ವಿಸ್ತರಣೆ ಮಾಡಬೇಕಿದೆ.
ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉಡುಪಿಯ ಒಂದು ಶಾಲೆಯಲ್ಲಿನ ಆರು ಮಕ್ಕಳ ಸಮಸ್ಯೆಯನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕೆಲ ಕಿಡಿಗೇಡಿಗಳು ಮಾಡ್ತಿದ್ದಾರೆ. ರಜೆ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕೊರೊನಾ ಮೂರನೇ ಅಲೆಯಲ್ಲೇ ಶಾಲೆ ಆರಂಭಿಸಿದ್ದೇವೆ. ಈಗ ಕಿಡಿಗೇಡಿಗಳ ಕೃತ್ಯದಿಂದ ಕಾಲೇಜು ಬಂದ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಿಎಂ ಜೊತೆಗೆ ಸಭೆ ಮಾಡಿ ರಜೆ ಕುರಿತು ತೀರ್ಮಾನ ಮಾಡಲಾಗುತ್ತೆ. ಶನಿವಾರ ಭಾನುವಾರ ಇರುವುದರಿಂದ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಮುಸ್ಲಿಂ ಮುಖಂಡರು, ಸ್ವಾಮೀಜಿಗಳು ಮನವಿ ಮಾಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ವಿಚಾರ ಸಂಘರ್ಷಣೆ ಆಗಬಾರದು. ಮಕ್ಕಳಲ್ಲಿ ಸಮಾನತೆ ಭಾಗವಾಗಿ ಶಾಲೆಗಳು ಇವೆ. ಹೀಗಾಗಿ ಸಮವಸ್ತ್ರ ಪಾಲನೆ ಮಾಡಿ. ಸಮವಸ್ತ್ರ ಪಾಲನೆ ಮಾಡುವುದು ಜನರ, ಮುಖಂಡರ, ಸ್ವಾಮೀಜಿಗಳ, ಮುಸ್ಲಿಂ ಮುಖಂಡರ ಅಭಿಪ್ರಾಯ ಇದೆ. ಹೀಗಾಗಿ ಸಮವಸ್ತ್ರ ಧರಿಸಿ ಶಿಕ್ಷಣ ಸಂಸ್ಥೆಗೆ ಬನ್ನಿ ಅಂತ ಸಚಿವರು ಮನವಿ ಮಾಡಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಂತ್ರಿ ಮಗನಿಂದಲೇ ಕೇಸರಿ ಶಾಲು, ಪೇಟ ಹಂಚಿಕೆ : ಡಿಕೆಶಿ ಆರೋಪ
ಇನ್ನು ಮಂತ್ರಿಯೇ ಕೇಸರಿ ಶಾಲು ಹಂಚಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ.ಶಿವಕುಮಾರ್‌ರಲ್ಲಿ ಒಂದು ಮನವಿ, ಯಾರು ಹುಟ್ಟು ಹಾಕಿದ್ದಾರೆ ಈ ವಿಚಾರವನ್ನು ಗಮನಿಸಿ ಹೇಳಿಕೆ ಕೊಡಲಿ. ಸರ್ಕಾರ ಕಾನೂನು ಮೀರಿ ಏನೂ ಮಾಡಿಲ್ಲ. ಮಕ್ಕಳ ವಿಷಯದಲ್ಲಿ ನೋಡಿಕೊಂಡು ಮಾತನಾಡಲಿ ಎಂದರು.
ಮಂಡ್ಯದಲ್ಲಿ ವಿದ್ಯಾರ್ಥಿನಿಗೆ ಬಹುಮಾನ ಘೋಷಣೆ ವಿಚಾರಕ್ಕೆ ಉತ್ತರಿಸಿದ ಸಚಿವರು, ಇವೆಲ್ಲವನ್ನೂ ಕೂಡ ತನಿಖೆ ಮಾಡಬೇಕಿದೆ. ಇವರ ಹಿಂದೆ ಒಂದು ತಂಡ ಕೆಲಸ ಮಾಡಿದೆ ಎಂಬುವುದು ಸ್ಪಷ್ಟವಾಗಿದೆ ಎಂದು ಹೇಳಿದರು.