ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ಮತ್ತೆ ಜೂಜಾಟದ ವಿಚಾರ ಪ್ರಸ್ತಾಪವಾಗಿದೆ. ಶಾಸಕ ಡಾ.ರಂಗನಾಥ್ ಹೆಚ್ ಡಿ, ಕೋವಿಡ್ ಬಂದ ಹಿನ್ನೆಲೆಯಲ್ಲಿ ಬಹಳಷ್ಟು ಗ್ರಾಮೀಣ ಪ್ರದೇಶದ ಯುವಕರು ಗುಳೆ ಬಂದಿದ್ದಾರೆ. ಹಲವು ಕಡೆ ಕಾನೂನು ಬಾಹಿರವಾಗಿ ಜೂಜಾಟ ನಡೆಯುತ್ತಿದೆ. ಜೂಜಾಟದ ವ್ಯವಸ್ಥೆಯನ್ನು ಸಂಘಟನೆಯಾಗಿ ಕೆಲ ಸ್ಥಳಗಳಲ್ಲಿ ಸೇರುತ್ತಾರೆ. ಇಂತಹ ಕೃತ್ಯಗಳನ್ನು ತಡೆಯಬೇಕು. ಗ್ರಾಮೀಣ ಪ್ರದೇಶದ ಯುವಕರು ಬೆಂಗಳೂರಿಗೆ ಬಂದು ಜೂಜಾಟ ಆಡುತ್ತಾರೆ. ಈ ಬಗ್ಗೆ ಕ್ರಮ ಸೂಕ್ತ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ರಂಗನಾಥ್ ಅವರ ವಿಷಯ ಪ್ರಸ್ತಾಪ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜೂಜಾಟ ಒಂದು ಸಾಮಾಜಿಕ ಪಿಡುಗು. ಇದನ್ನು ಶಾಶ್ವತವಾಗಿ ನಿಲ್ಲಿಸಲು ವಿಶೇಷ ವ್ಯವಸ್ಥೆಗಳ ಬಗ್ಗೆ ಯೋಚಿಸುತ್ತಿದ್ದೇವೆ. ಘಟಕವಾರು ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇವೆ. ಎಲ್ಲಿ ಜೂಜಾಟ ನಡೆಯುತ್ತದೆಯೋ ಅದರ ಮೇಲೆ ಕಣ್ಣಿಟ್ಟು, ಕಾನೂನು ಕ್ರಮ ಜರಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಗ್ಯಾಂಬ್ಲಿಂಗ್ ಮುಕ್ತ ಕರ್ನಾಟಕ ಮಾಡುವ ನಮ್ಮ ಬದ್ಧತೆ, ಇದಕ್ಕಾಗಿ ಕಠಿಣ ಕ್ರಮ ಜರುಗಿಸಲು ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆಯನ್ನು 2021ಕ್ಕೆ ಕರ್ನಾಟಕ ಪೊಲೀಸ್ ಆ್ಯಕ್ಟ್-1963ರ ಕಾನೂನನ್ನು ಪರಿಷ್ಕರಣೆ ಮಾಡಲು ಮಸೂದೆಯನ್ನು ತರಲಾಗುತ್ತದೆ. ಇದರಿಂದ ನಮ್ಮ ಪೊಲೀಸರ ಕೈ ಬಲಪಡಿಸುವುದರ ಜೊತೆಗೆ ಗ್ಯಾಂಬ್ಲಿಂಗ್ ಮುಕ್ತ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಶಾಸಕ ಡಿ ಸಿ ತಮ್ಮಣ್ಣ ಮಾತನಾಡಿ, ಗಡಿ ಗ್ರಾಮದಲ್ಲಿ ಜೂಜು ಹೆಚ್ಚಾಗಿ ನಡೆಯುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಕೈದಿಗಳು ಕುಣಿಗಲ್ ತಾಲೂಕಿನಲ್ಲಿ ಏಜೆಂಟ್‌ಗಳನ್ನು ಇಟ್ಟುಕೊಂಡು ದಂಧೆಗಳನ್ನು ನಡೆಸುತ್ತಿದ್ದಾರೆ. ಇಸ್ಪೀಟ್ ದಂಧೆಯನ್ನು ಒಂದೊಂದು ದಿನ ಒಂದೊಂದು ತೋಟದಲ್ಲಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇದೊಂದು ದೊಡ್ಡ ಪಿಡುಗಾಗಿದೆ. ರೌಡಿಸಂ ಕೂಡ ಬೆಳೆಯುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳು ಬೇಲ್ ಮೇಲೆ ಬಂದು ಇಲ್ಲಿ ದಂಧೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ರೌಡಿಸಂ ಕೂಡ ಬೆಳೆಯುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಯು ಟಿ ಖಾದರ್, ಆಯಾ ಕ್ಷೇತ್ರದ ಶಾಸಕರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ರೆ ಈ ಗ್ಯಾಂಬ್ಲಿಂಗ್ಅನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ಈ ವೇಳೆ ಸಿಎಂ ಮಾತನಾಡಿ, ಕಾನೂನಿನಲ್ಲಿ ಬಿಗಿಯಾಗಿರಬೇಕು. ಆರೋಪಿಗಳನ್ನು ಪೊಲೀಸರು ಹಿಡಿದರೂ ಒಂದೆರಡು ದಿನಗಳಲ್ಲಿ ದಂಡ ಕಟ್ಟಿ ಹೊರ ಬರುತ್ತಾರೆ. ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ಕಾನೂನಿಗೆ ಬಲ ನೀಡುವ ಮೂಲಕ ತಿದ್ದುಪಡಿ ತಂದಿದ್ದೇವೆ ಎಂದು ಹೇಳಿದರು.