ಬೆಂಗಳೂರು : ಕೇಂದ್ರ ಸರ್ಕಾರದ ಸರ್ವೇ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿಕೊಂಡು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರದ ರಾಘವೇಂದ್ರ ಬಂಧಿತ ಆರೋಪಿ. ನಿರುದ್ಯೋಗಿಗಳಿಂದ ಅಕ್ರಮವಾಗಿ ಹಣ ಪಡೆದು ಮಾಡಿಕೊಂಡಿದ್ದ ವಾಸದ ಮನೆ, ಐಷಾರಾಮಿ ಕಾರುಗಳು, ಚಿನ್ನಾಭರಣ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕುಂದಾಪುರ ನಿವಾಸಿಯಾಗಿರುವ ರಾಘವೇಂದ್ರ ಉಡುಪಿಯಲ್ಲಿ ಖಾಸಗಿಯಾಗಿ ಸರ್ವೇಯರ್ ಕೆಲಸ ಮಾಡುತ್ತಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡಲು ವಾಮಮಾರ್ಗ ಹಿಡಿದ ರಾಘವೇಂದ್ರ, ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೇಂದ್ರ ಕಂದಾಯ ಇಲಾಖೆಯ ಡೆಪ್ಯೂಟಿ ಕಮಿಷನರ್ ಆಗಿ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ.
ಜನರಲ್ಲಿ ತಾನು ಸರ್ಕಾರಿ ಉದ್ಯೋಗಿ ಎಂದು ನಂಬಿಸಲು ತನ್ನ ಕಾರಿನ ಮುಂದೆ ಭಾರತ ಸರ್ಕಾರ ಎಂದು ಬೋರ್ಡ್ ಹಾಕಿಕೊಂಡು ಸರ್ವೇ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ.
ಖಾಲಿ ಬಾಂಡ್ ಪೇಪರ್ಗೆ ಸಹಿ ಹಾಕಿಸಿಕೊಳ್ಳುತ್ತಿದ್ದ: ಕೇಂದ್ರ ಸರ್ಕಾರದ ಉನ್ನತ ಅಧಿಕಾರಿ ಸೋಗಿನಲ್ಲಿ ಐಷಾರಾಮಿ ಕಾರಿನಲ್ಲಿ ಓಡಾಡಿಕೊಂಡಿದ್ದ ವಂಚಕ ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ ಕಾರವಾರ ಸೇರಿ ಬಹುತೇಕ ಉತ್ತರ ಕರ್ನಾಟಕದ ಸರ್ಕಾರಿ ಕೆಲಸದ ಉದ್ಯೋಗಾಕಾಂಕ್ಷಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ.
ತಾನು ಕೇಂದ್ರ ಸರ್ವೇ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳ ಪೋಷಕರಿಗೆ ನಂಬಿಸುತ್ತಿದ್ದ. ವಿದ್ಯಾರ್ಹತೆ ಮೇರೆಗೆ ಕೆಲಸ ಕೊಡಿಸುವುದಾಗಿ ಹೇಳಿ ಒಬ್ಬರಿಂದ ಸುಮಾರು 20 ಲಕ್ಷ ರೂ. ಪಡೆಯುತ್ತಿದ್ದ. ನಾನಾ ಸಬೂಬು ಹೇಳಿ ಖಾಲಿ ಬಾಂಡ್ ಪೇಪರ್ ಹಾಗೂ ಚೆಕ್ಗಳ ಮೇಲೆ ಉದ್ಯೋಗಾಕಾಂಕ್ಷಿಗಳ ಸಹಿ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಹಣ ಪಡೆದು ಜನರನ್ನು ಯಾಮಾರಿಸುತ್ತಿದ್ದ.
ಸಂತ್ರಸ್ತ ಎಂದು ಬಿಂಬಿಸಿಕೊಳ್ಳುತ್ತಿದ್ದ: ಕೆಲಸ ಕೊಡಿಸದಿದ್ದಾಗ ಹಣ ಕೇಳಲು ಮುಂದಾದರೆ ಪ್ರಿಪ್ಲ್ಯಾನ್ನಂತೆ ಸಹಿ ಹಾಕಿಸಿಕೊಂಡಿದ್ದ ಬಾಂಡ್ ಪತ್ರಗಳಲ್ಲಿ ತಾನೇ ಸಾಲ ನೀಡಿರುವುದಾಗಿ ಬರೆದುಕೊಳ್ಳುತ್ತಿದ್ದ. ಸಹಿ ಹಾಕಲಾದ ಚೆಕ್ನಲ್ಲಿ ಇಂತಿಷ್ಟು ಹಣ ನೀಡಿರುವುದಾಗಿ ನಮೂದಿಸಿದ್ದ. ಈ ಮೂಲಕ ಕಾನೂನು ದೃಷ್ಟಿಯಿಂದ ತಾನೊಬ್ಬ ಸಂತ್ರಸ್ತ ಎಂದು ಬಿಂಬಿಸಿಕೊಂಡು ನ್ಯಾಯಾಲಯದಲ್ಲಿ ಉದ್ಯೋಗಾಂಕ್ಷಿಗಳ ವಿರುದ್ಧವೇ ಚೆಕ್ ಬೌನ್ಸ್ ಕೇಸ್ ಹಾಕಿ ಬೆದರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಿಸಿ ಆಸ್ತಿ ಮಾಡಿದ್ದ ಭೂಪ ಅಂದರ್ : ನಗರದ ಜೆ.ಪಿ. ನಗರದಲ್ಲಿ ವಾಸವಾಗಿದ್ದ ರಾಘವೇಂದ್ರನಿಗೆ ಹಾವೇರಿ, ಬಾಗಲಕೋಟೆ, ಬೆಂಗಳೂರು ಮತ್ತು ಕುಂದಾಪುರದ ನಾಲ್ವರು ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡಿದ್ದ. ನಿರುದ್ಯೋಗಿಗಳಿಂದ ಪಡೆದ ಹಣದಿಂದ ಕಾರು, ಊರಿನಲ್ಲಿ ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಫ್ಲ್ಯಾಟ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀಸಿದ್ದ.
ಇದನ್ನೂ ಓದಿ: ಯಾದಗಿರಿ: ಮದ್ಯದ ಅಮಲಿನಲ್ಲಿ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್
ಸದ್ಯ ಆತನನ್ನು ಬಂಧಿಸಿ ನಕಲಿ ಗುರುತಿನ ಚೀಟಿ, ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್‌ಟಾಪ್, ಚೆಕ್ ಬುಕ್, ಬಾಂಡ್ ಪೇಪರ್ ಹಾಗೂ ಖರೀದಿಸಿದ್ದ ಆಸ್ತಿ ಪತ್ರಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಎಸಿಪಿ ಹೆಚ್.ಎನ್. ಧರ್ಮೇಂದ್ರ ಹಾಗೂ ಇನ್ಸ್ಪೆಕ್ಟರ್ ಎಂ.ಎಂ ಭರತ್ ನೇತೃತ್ವದಲ್ಲಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.