ಬೆಂಗಳೂರು : ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಂಟಿ ಸದನಗಳನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂಬಿರ್ಲಾ ಭಾಷಣ ಮಾಡಿದರು. ಆದರೆ, ಸ್ಪೀಕರ್ ಅವರ ಹಿಂದಿ ಭಾಷಣಕ್ಕೆ ಜೆಡಿಎಸ್ ಶಾಸಕ ಡಾ.ಕೆ ಅನ್ನದಾನಿ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳ ರಕ್ಷಣೆ' ಕುರಿತು ಓಂಬಿರ್ಲಾ ಅವರು ಭಾಷಣ ಆರಂಭಿಸುತ್ತಿದ್ದಂತೆ ಶಾಸಕ ಅನ್ನದಾನಿ ಅವರು ಕನ್ನಡದಲ್ಲಿ ಮಾತನಾಡಬೇಕು, ಜೈ ಕರ್ನಾಟಕ ಎಂದು ಸದನದಲ್ಲೇ ಘೋಷಣೆಗಳನ್ನು ಕೂಗಿ, ಕನ್ನಡ ಬಾವುಟ ಪ್ರದರ್ಶಿಸಿದರು. ಆ ಮೂಲಕ ಸ್ಪೀಕರ್ ಹಿಂದಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
'ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವುದಕ್ಕೆ ಪ್ರತಿಭಟನೆ':
ವಿಧಾನಸಭೆಯಲ್ಲಿ ಪ್ರತಿಭಟನೆ ಬಳಿಕ ಪ್ರತಿಕ್ರಿಯಿಸಿದ ಶಾಸಕ ಅನ್ನದಾನಿ ಅವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಜಂಟಿ ಅಧಿವೇಶನ ಉದ್ದೇಶಿ ಭಾಷಣ ಮಾಡಿರುವುದು ಸಂತೋಷದ ವಿಷಯ. ಆದರೆ, ಹಿಂದಿಯಲ್ಲಿ ಭಾಷಣ ಮಾಡಿರುವುದು ಉತ್ತರ ಭಾರತದ ಹಿಂದಿ ಭಾಷೆಯನ್ನು ಕನ್ನಡದ ಮೇಲೆ ಹೇರುವ ಉದ್ದೇಶವಾಗಿದೆ ಎಂದು ಕಿಡಿಕಾರಿದರು.
ಕನ್ನಡ ನೆಲೆ, ಜಲ, ಭಾಷೆ ಹಾಗೂ ಸಂಸ್ಕೃತಿಗೆ ಕೆಲವರು ಗೌರವ ಕೊಡುತ್ತಿಲ್ಲ. ನೀರಿಗೆ, ನದಿಗೆ ಹೋರಾಟ ಅನಿವಾರ್ಯವಾಗಿದೆ. ದಕ್ಷಿಣ ಭಾರತದ, ಅದರಲ್ಲೂ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಅನ್ಯಾಯ ಆಗುತ್ತಿದೆ. ಹೀಗಾಗಿ, ಲೋಕಸಭಾ ಸ್ಪೀಕರ್ ಭಾಷಣದ ವೇಳೆ ಪ್ರತಿಭಟನೆ ಮೂಲಕ ಎಚ್ಚರಿಸಿರುವುದಾಗಿ ತಿಳಿಸಿದರು.