ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇದೇ ಜುಲೈ 26ಕ್ಕೆ 2 ವರ್ಷಗಳು ಪೂರ್ಣಗೊಳ್ಳಲಿದ್ದು, ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಅವಧಿಯಲ್ಲಿ ಅವರಿಗೆ ಎದುರಾದ ಕಾನೂನು ಹೋರಾಟಗಳು ಯಾವುವು ನೋಡುವುದಾದರೆ,
ಐಟಿ ಕಾರಿಡಾರ್ ಡಿನೋಟಿಫಿಕೇಷನ ಹಗರಣ
2000-2001ನೇ ಸಾಲಿನಲ್ಲಿ ನಗರದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಭೂಮಿಯನ್ನು ಐಟಿ ಕಾರಿಡಾರ್ ಆಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಮಾರತಹಳ್ಳಿ, ಬೆಳ್ಳಂದೂರು, ಸರ್ಜಾರಪುರ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಗ್ರಾಮಗಳಲ್ಲಿನ 434 ಎಕರೆ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು.
ಈ ವೇಳೆ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕೆಐಎಡಿಬಿ ವಶಪಡಿಸಿಕೊಂಡಿದ್ದ ದೇವರಬೀಸನಹಳ್ಳಿಯ ಸರ್ವೇ ನಂ. 49ರ 4.30 ಎಕರೆ, ಬೆಳ್ಳಂದೂರು ಗ್ರಾಮದ ಸರ್ವೇ ನಂ.46.1ರ 1.17 ಎಕರೆ, ಸರ್ವೇ ನಂ. 18ರ 1.10 ಎಕರೆ, ಸರ್ವೇ ನಂ. 10ರ 33 ಗುಂಟೆ ಜಾಗವನ್ನು ಡಿನೋಟಿಫಿಕೇಷನ್ ಮಾಡಲು ಅಕ್ರಮವಾಗಿ ಆದೇಶಿಸಿದ್ದಾರೆ ಎಂದು ಆರೋಪಿಸಿ ವಾಸುದೇವ ರೆಡ್ಡಿ ಎಂಬುವರು 2013ರ ಜುಲೈ 10ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಯಡಿಯೂರಪ್ಪ ಅವರು ಸುದೀರ್ಘ ಕಾಲದಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸರು ಕಳೆದ ತಿಂಗಳು 10 ಸಾವಿರ ಪುಟಗಳ ಬಿ ರಿಪೋರ್ಟ್ ಸಲ್ಲಿಸಿದ್ದರೂ ಒಪ್ಪದ ಜನಪ್ರತಿನಿಧಿಗಳ ವಿರುದ್ಧದ ವಿಚಾರಣಾ ನ್ಯಾಯಾಲಯ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದೆ.
ಹೂವಿನಾಯಕನಹಳ್ಳಿ ಡಿನೋಟಿಫಿಕೇಷನ್
ಬೆಂಗಳೂರಿನ ಹೂವಿನಾಯಕನಳ್ಳಿ ಗ್ರಾಮದಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಕೆಐಎಡಿಬಿ ವಶಪಡಿಸಿಕೊಂಡಿದ್ದ 20 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಆಲಂಪಾಷಾ 2011ರ ಆಗಸ್ಟ್ 20ರಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2012ರ ಮೇ 21ರಂದು ಬಿಎಸ್ವೈ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ 77 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಕೆಲ ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯ 2016ರ ಜುಲೈ 25ರಂದು ಆರೋಪಿಗಳ ವಿರುದ್ಧ ಕಾಗ್ನಿಸೆನ್ಸ್ ತೆಗೆದುಕೊಳ್ಳಲು ನಿರಾಕರಿಸಿ, ಚಾರ್ಚ್‌ಶೀಟ್ ರದ್ದುಪಡಿಸಿ ಆದೇಶಿಸಿತ್ತು. ಕಳೆದ ಮಾರ್ಚ್ ನಲ್ಲಿ ಲೋಕಾಯುಕ್ತ ಕೋರ್ಟ್ ಆದೇಶ ರದ್ದುಪಡಿಸಿರುವ ಹೈಕೋರ್ಟ್ ಕಾನೂನು ರೀತಿ ಕ್ರಮ ಜರುಗಿಸಲು ನಿರ್ದೇಶಿಸಿದೆ.
ಸಿಎಂ, ಕುಟುಂಬ, ಆಪ್ತರ ವಿರುದ್ಧ ಭ್ರಷ್ಟಾಚಾರ ಆರೋಪ
ಸಿಎಂ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಇತರ ಆಪ್ತರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿಎಂ ಕುಟುಂಬದವರು ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಹೀಗಾಗಿ ಇವರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿರುದ್ಧದ ಕೋರ್ಟ್ ನಲ್ಲಿ ಪಿಸಿಆರ್ ದಾಖಲಿಸಿದ್ದರು.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 8, 9, 10, 13 ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 383, 384, 415, 418, 420 ಹಾಗೂ 120 ಬಿ ಅಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಕ್ತ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ದೂರುದಾರರು ಕೋರಿದ್ದರು. ಅರ್ಜಿಯನ್ನು ವಿಶೇಷ ಕೋರ್ಟ್ ಇದೇ ಜುಲೈ 8ರಂದು ವಜಾ ಮಾಡಿದೆ. ಇದೀಗ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಗಂಗೇನಹಳ್ಳಿ ಡಿನೋಟಿಫಿಕೇಷನ್
ನಗರದ ಗಂಗೇನಹಳ್ಳಿ ಬಳಿಯ 1.11 ಎಕರೆ ಜಮೀನು ಡಿನೋಟಿಫೈ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಜಯಕುಮಾರ್ ಹಿರೇಮಠ ಎಂಬುವರು 2015ರಲ್ಲಿ ದೂರು ದಾಖಲಿಸಿದ್ದಾರೆ. ಈ ಎಫ್ಆಆರ್ ರದ್ದು ಕೋರಿ ಬಿಎಸ್ ವೈ ಕಳೆದ ವರ್ಷ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2021ರ ಜನವರಿಯಲ್ಲಿ ವಜಾಗೊಳಿಸಿದೆ. ಲೋಕಾಯುಕ್ತ ತನಿಖೆ ಮುಂದುವರೆಸಲು ಆದೇಶಿಸಿರುವ ಹೈಕೋರ್ಟ್ ಬಿಎಸ್ ವೈ ಅವರಿಗೆ 25,000 ರೂಪಾಯಿ ದಂಡ ಕೂಡ ವಿಧಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ
2019ರ ನವಂಬರ್ 23ರಂದು ಗೋಕಾಕ್ ಉಪ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದು ನೀತಿಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು. ಆದರೆ, 'ಬಿ' ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಬಿಎಸ್ವೈಗೆ ಸೂಚಿಸಿತ್ತು. ಅಂತಿಮವಾಗಿ ದೂರು ದಾಖಲಿಸಿರುವ ಕ್ರಮ ಸರಿಯಲ್ಲವೆಂದು ಹೈಕೋರ್ಟ್ ಕಳೆದ ವರ್ಷ ರದ್ದುಪಡಿಸಿತು.
ಆಪ್ತ ವಿಶ್ವನಾಥ್ ಗೆ ಉನ್ನತ ಹುದ್ದೆ
ಸಿಎಂ ಬಿಎಸ್ವೈ ಅವರ ಆಪ್ತಕಾರ್ಯದರ್ಶಿ ಆಗಿದ್ದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ವಿಶ್ವನಾಥ ಪಿ. ಹಿರೇಮಠ ಅವರಿಗೆ ಕೆಎಎಸ್ಎ ಗ್ರೂಪ್ ಹುದ್ದೆ ಕಲ್ಪಿಸಿದ ವಿಚಾರವಾಗಿ ಅನಗತ್ಯ ಮುಜುಗರ ಎದುರಿಸುವಂತಾಗಿತ್ತು. 2020ರ ಜುಲೈನಲ್ಲಿ ಡಿಪಿಎಆರ್ ಪ್ರಧಾನ ಕಾರ್ಯದರ್ಶಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿರುವ ಇತರ ಅಧಿಕಾರಿಗಳು ಸೇವಾ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಪಿಎಗೆ ರಾಜಕೀಯ ಕಾರ್ಯದರ್ಶಿ ಹುದ್ದೆ
ಯಡಿಯೂರಪ್ಪ ಪಿಎ ಆಗಿದ್ದ ಸಂತೋಷ್ಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಖುದ್ದು ಪಕ್ಷದ ಮುಖಂಡರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದನ್ನು ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸಕರಲ್ಲದ ಸಂತೋಷ್ಗೆ ನೀಡಿರುವ ಹುದ್ದೆ ರದ್ದುಪಡಿಸುವಂತೆ ಕೋರಿದ್ದಾರೆ. ಮತ್ತೊಂದು ಅರ್ಜಿಯಲ್ಲಿ ಬಿಎಸ್ ವೈ ಆಪ್ತರಿಗೆ ಸಚಿವ ಸ್ಥಾನಮಾನ ಕೊಟ್ಟಿರುವುದನ್ನು ಪ್ರಶ್ನಿಸಲಾಗಿದೆ.
ಕೋವಿಡ್ ನಿಯಮ ಉಲ್ಲಂಘನೆ
ಕೋವಿಡ್ ನಿಯಮಗಳನ್ನು ಪಾಲಿಸದ ವಿಚಾರವಾಗಿ ಸಿಎಂ ವಿರುದ್ಧ ಹಲವು ಬಾರಿ ಹೈಕೋರ್ಟ್ ಗೆ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸಿಎಂ ಆಗಿರುವುದರಿಂದ ಕರ್ತವ್ಯ ನಿರ್ವಹಣೆ ಕಾರಣ ನೀಡಿ ಹೈಕೋರ್ಟ್ ಕೆಂಗಣ್ಣಿನಿಂದ ತಪ್ಪಿಸಿಕೊಂಡರೂ ಹಲವು ಬಾರಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪುತ್ರ ವಿಜಯೇಂದ್ರ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದು ಕೂಡ ಸಿಎಂ ಗೆ ಕೋರ್ಟ್ ನಲ್ಲಿ ಮುಜುಗರ ಎದುರಿಸುವಂತಾಗಿತ್ತು.
ಖಾಸಗಿ ಸುದ್ದಿ ವಾಹಿನಿ ಮೇಲೆ ದಾಳಿ
ಸಿಎಂ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಸುದ್ದಿ ಬಿತ್ತರಿಸಿದ್ದ ಕನ್ನಡದ ಸುದ್ದಿ ವಾಹಿನಿಯ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ ಅಲ್ಲಿನ ಉಪಕರಣಗಳನ್ನು ವಶಪಡಿಸಿಕೊಂಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಅಂತಿಮವಾಗಿ 2020ರ ನವೆಂಬರ್ ನಲ್ಲಿ ಹೈಕೋರ್ಟ್ ವಾಹಿನಿಯ ಉಪಕರಣಗಳನ್ನು, ಪಾಸ್ ವರ್ಡ್ ಗಳನ್ನೂ ಹಿಂದಿರುಗಿಸಲು ಆದೇಶಿಸಿತ್ತು.