ಬೆಂಗಳೂರು: ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಡೋಣ. ಇದರಲ್ಲಿ ಯಾವುದೇ ರಾಜಕೀಯ ಬೇಡ ನಮ್ಮ ಸಲಹೆ ಸೂಚನೆಗಳನ್ನು ಸಹ ಪರಿಗಣಿಸಿ ಎಂದು ಪ್ರತಿಪಕ್ಷ ನಾಯಕರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ವೈರಸ್ ಬಗ್ಗೆ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್ವೈ, ಕೊರೊನಾ ಸೋಂಕು ತಡೆಗಟ್ಟಲು ಆರಂಭದಿಂದ ಇಲ್ಲಿಯವರೆಗೆ ಸರ್ಕಾರ ಯಾವ ಯಾವ ಕ್ರಮ ಕೈಗೊಂಡಿದೆ ಎನ್ನುವುದನ್ನು ಪ್ರತಿಪಕ್ಷ ನಾಯಕರಿಗೆ ತಿಳಿಸಿದರು. ಸಿಎಂಗೆ ಸಾಥ್ ನೀಡಿದ ಶ್ರೀರಾಮುಲು ಹಾಗೂ ಸುಧಾಕರ್, ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕೈಗೊಂಡಿರುವ ವೈದ್ಯಕೀಯ ಸೌಲಭ್ಯ, ಚಿಕಿತ್ಸಾ ವ್ಯವಸ್ಥೆ ಇತ್ಯಾದಿಗಳ ಕುರಿತು ವಿವರ ನೀಡಿದರು.
ಸರ್ಕಾರದ ಉತ್ತರ ಆಲಿಸಿದ ಪ್ರತಿಪಕ್ಷ ನಾಯಕರು, ಬೇರೆ ಇಲಾಖೆಗೆ ಕೊಡುವ ಹಣವನ್ನು ಸ್ವಲ್ಪ ದಿನ ನಿಲ್ಲಿಸಿ. ಆ ಹಣವನ್ನು ಕೊರೊನಾಗೆ ಬಳಸಿ. ನಾವೇನು ವಿರೋಧ ಮಾಡುವುದಿಲ್ಲ. ಕೊರೊನಾ ತಡೆಗಟ್ಟಲು ಹೆಚ್ಚಿನ ಹಣ ಮೀಸಲಿಡಿ ಎಂದು ಒಮ್ಮತದ ಸಲಹೆ ನೀಡಿದರು. ಅಲ್ಲದೇ, ಸರ್ಕಾರದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ನಾಯಕರು, ಕೆಲ ಬದಲಾವಣೆಗೆ ಸೂಚನೆ ನೀಡಿದರು. ಸಾರ್ವಜನಿಕರಿಗೆ ಸಮರ್ಪಕವಾಗಿ ದಿನಸಿ ಸಿಗುವಂತೆ ವ್ಯವಸ್ಥೆ ಮಾಡಬೇಕು.108 ಆಂಬುಲೆನ್ಸ್ ಗಳನ್ನು ಟೆಸ್ಟಿಂಗ್ ಲ್ಯಾಬ್ ರೀತಿ ಬಳಸಿಕೊಳ್ಳಲು ಸಲಹೆ ನೀಡಿದರು.