ಬೆಂಗಳೂರು: ಹಕ್ಕುಚ್ಯುತಿಯ ಕಿಚ್ಚಿಗೆ ವಿಧಾನಸಭೆಯ ಇಡೀ ದಿನದ ಕಲಾಪ ಬಲಿಯಾಯಿತು.
ಐದು ಬಾರಿ ಸದನ ಸೇರಿದರೂ ಕಲಾಪ ನಡೆಯದೇ ಬರೀ ಸಚಿವ ಸುಧಾಕರ್ ಮೊದಲು ಮಾತನಾಡಬೇಕು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲು ಮಾತನಾಡಬೇಕು ಎನ್ನುವ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮೊಂಡುತನಕ್ಕೆ ಸಿಲುಕಿ ನಾಳೆಗೆ ಮುಂದೂಡಿಕೆಯಾಯಿತು.
ಮಧ್ಯಾಹ್ನ ಮುಂದೂಡಲ್ಪಟ್ಟಿದ್ದ ವಿಧಾನಸಭೆ ಕಲಾಪ ಸಂಜೆ ನಾಲ್ಕರ ಬದಲು ಒಂದು ಗಂಟೆ ತಡವಾಗಿ ಐದು ಗಂಟೆಗೆ ಆರಂಭಗೊಂಡಿತು. ಸದನ ಸೇರುತ್ತಿದ್ದಂತೆ ನನಗೆ ಮಾತನಾಡಲು ಅವಕಾಶ ನೀಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದ್ದುನಿಂತರು. ಆದರೆ ಇದಕ್ಕೆ ಆಕ್ಷೇಪಿಸಿದ ಸಚಿವ ಸುಧಾಕರ್, ಮೊಟಕುಗೊಂಡಿರುವ ನನ್ನ ಭಾಷಣ ಪೂರ್ಣಗೊಳಿಸಲು ಅವಕಾಶ ನೀಡಿ ಎಂದು ಪಟ್ಟುಹಿಡಿದರು. ಇದನ್ನು ಒಪ್ಪದ ಸಿದ್ದರಾಮಯ್ಯ, ಅವರು ಏನಾದರೂ ಮಾಡಿಕೊಳ್ಳಲಿ ಈಗಾಗಲೇ ನಾನು ಹಕ್ಕುಚ್ಯುತಿ ಸೂಚನೆ ಕಳಿಸಿಕೊಟ್ಟಿದ್ದೇನೆ. ಅದರ ಮೇಲೆ ಮಾತನಾಡಲು ಅವಕಾಶ ನೀಡಿದ್ದೀರಿ, ಮೊದಲು ನಾನು ಮಾತನಾಡುತ್ತೇನೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವ ಸುಧಾಕರ್ ಮಾತು ಮುಗಿಸಿದ ನಂತರ ಹಕ್ಕುಚ್ಯುತಿ ತೆಗೆದುಕೊಳ್ಳಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ನಾನು ಮೊದಲು ಮಾತನಾಡುತ್ತೇನೆ ಎಂದರು. ಸಿದ್ದರಾಮಯ್ಯ ಪರ ಕೃಷ್ಣ ಬೈರೇಗೌಡ ಕೂಡ ಬ್ಯಾಟಿಂಗ್ ಮಾಡಿದರು. ಸಿದ್ದರಾಮಯ್ಯ ಅವರನ್ನು ಮಾತಿಗೆ ಕರೆದಿದ್ದೀರಿ, ಪೀಠದಿಂದ ಅವಕಾಶ ಕೊಟ್ಟಿದ್ದೀರಿ, ಈಗ ಮಾತನಾಡಲು ಬಿಡಿ, ಆಡಳಿತ ಪಕ್ಷದವರು ಈಗ ಹೇಳುತ್ತಿರುವುದು ಅಪ್ರಸ್ತುತ ಎಂದರು.
ಈ ವೇಳೆ ನನಗೆ 10 ನಿಮಿಷ ಸಮಯ ಕೊಡಿ ಅಷ್ಟರೊಳಗೆ ನನ್ನ ಮಾತು ಮುಗಿಸುತ್ತೇನೆ, ಆ ಮೇಲೆ ಅವರು ಮಾತಾಡಲಿ, ನನ್ನ ಭಾಷಣ ಮುಗಿಯುವ ಮೊದಲೇ ಹಕ್ಕುಚ್ಯುತಿ ಚರ್ಚೆ ಹೇಗೆ ಎಂದು ಪ್ರಶ್ನಿಸಿದರು. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪ ತೀವ್ರಗೊಳ್ಳುತ್ತಿದ್ದಂತೆ ಸಂಧಾನಕ್ಕೆ ಮುಂದಾದ ಸ್ಪೀಕರ್, ಸುಧಾಕರ್ 10 ನಿಮಿಷದಲ್ಲಿ ಮಾತು ಮುಗಿಸುವುದಾಗಿ ಕೇಳುತ್ತಿದ್ದಾರೆ. ಅವಕಾಶ ಕೊಡೋಣ ಸಹಕರಿಸಿ ಎಂದರು. ಆದರೆ ಸ್ಪೀಕರ್ ಮನವಿಗೆ ಸಮ್ಮತಿಸದ ಸಿದ್ದರಾಮಯ್ಯ, ಹಾಗೆ ಮಾಡಲು ಬರಲ್ಲ, ನನಗೆ ಮಾತನಾಡಲು ಅವಕಾಶ ಕೊಟ್ಟು ನಂತರ ಏನು ಬೇಕಾದರೂ ಮಾಡಿಕೊಳ್ಳಿ ಎಂದರು. ಬಿಜೆಪಿ ಹಾಗು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರೆದು ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆಯಲ್ಲಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿಕೆ ಮಾಡಿದರು.