ಬೆಂಗಳೂರು: ಕೆಪಿಎಲ್ ಫಿಕ್ಸಿಂಗ್ ಕರ್ಮಕಾಂಡದ ತನಿಖೆ ಚುರುಕುಗೊಂಡ ಬೆನ್ನಲ್ಲೇ 2020ರ ಕೆಪಿಎಲ್ ಪಂದ್ಯವನ್ನು ರದ್ದು ಮಾಡಲಾಗಿದೆ.
ಈ ಕುರಿತು ಇಂದು ಮಾಹಿತಿ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಪ್ರಕರಣದ ತನಿಖೆ ಕುರಿತು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟರು. ಫಿಕ್ಸಿಂಗ್ ಆರೋಪದ ಹಿನ್ನೆಲೆ ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಹಾಗೂ ನಿರ್ದೇಶಕ ಸುದೀಂದ್ರ ಶಿಂಧೆಯನ್ನ ಬಂಧಿಸಲಾಗಿದೆ. ಸುದೀಂದ್ರ ಶಿಂಧೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಕ್ ಅಲಿ ಜೊತೆ ಸೇರಿಕೊಂಡು ಮ್ಯಾಚ್ ಫಿಕ್ಸಿಂಗ್ ಮಾಡ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
2020 ರ ಕೆಪಿಎಲ್ ಪಂದ್ಯ ರದ್ದು
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದ್ದು, ಕೆಪಿಎಲ್ ನಲ್ಲಿ ಹಲವು ಆಟಗಾರರು ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಹಿನ್ನೆಲೆ ಸದ್ಯ ತನಿಖೆ ಮುಂದುವರೆದಿರುವ ಕಾರಣ ಕೆಪಿಎಲ್ 2020 ರಲ್ಲಿ ನಡೆಯಬೇಕಿದ್ದ ಪಂದ್ಯಾವಳಿಗಳನ್ನ KSCA ಯಿಂದ ರದ್ದು ಮಾಡುವಂತೆ ನಗರ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದರು. ಹೀಗಾಗಿ ಸದ್ಯ ಕೆಪಿಎಲ್ ಹಗರಣದ ತನಿಖೆ ಮುಗಿಯುವವರೆಗೆ 2020ರ ಮ್ಯಾಚ್ ರದ್ದು ಆಗಿದ್ದು, ನಂತ್ರ ಕೆಪಿಎಲ್ ಮ್ಯಾಚ್ ನಡೆಯುವುದೇ ಅನುಮಾನವೆಂದು ತನಿಖಾಧಿಕಾರಿಗಳು ಹೇಳಿದ್ದಾರೆ.
KPL ನಿಂದ ಸಿನಿಮಾವರೆಗೆ ಸಿಸಿಬಿ ತನಿಖೆ:
ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ದಂಧೆ ಹಿಂದೆ ಸಿನಿಮಾ ತಾರೆಯರ ಕೈವಾಡ ಇರುವ ಶಂಕೆಯನ್ನ ತನಿಖಾಧಿಕಾರಿಗಳು ಹೊರ ಹಾಕಿದ್ದಾರೆ. ಯಾಕಂದ್ರೆ ಮ್ಯಾಚ್ ಮುಗಿದ ಬಳಿಕ ಕ್ರಿಕೆಟ್ ತಂಡದವರ ಜೊತೆ ಪಾರ್ಟಿಯಲ್ಲಿ ಸಿನಿಮಾದವರು ಭಾಗಿಯಾಗಿದ್ದಾರೆ. ಆಟಗಾರರು ಮತ್ತು ಮ್ಯಾನೇಜ್‌ಮೆಂಟ್ ಜೊತೆಗೆ ಸಿನಿ ನಟರು ಬೆಟ್ಟಿಂಗ್ ಮಾಡ್ತಿರುವ ಶಂಕೆ ಇದೆ. ಎರಡು ಸಿನಿಮಾ ಮಾಡಿದ ತಕ್ಷಣ ಕೆಲ ಸಿನಿ ತಾರೆಯರು ಅಷ್ಟೊಂದು ಹಣ ಮಾಡಿ ಹೈ ಫೈ ಕಾರಿನಲ್ಲಿ ಓಡಾಡ್ತಾರೆ. ಅವರಿಗೆಲ್ಲಾ ಹಣದ ಮೂಲ ಹೇಗೆ ಅನ್ನೋದ್ರ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ರು.
ಶರಣಾದ್ರೆ ತನಿಖೆಯಲ್ಲಿ ವಿನಾಯಿತಿ
ಕೆಪಿಎಲ್ ಹಗರಣದಲ್ಲಿ ಭಾಗಿಯಾದವರಿಗೆ ನಗರ ಪೊಲೀಸ್ ಆಯುಕ್ತ ಗೋಲ್ಡನ್ ಆಫರ್ ನೀಡಿದ್ದಾರೆ. ಕೆಪಿಎಲ್ ಹಗರಣದಲ್ಲಿ ಭಾಗಿಯಾದವರಿಗೆ ಕೆಲವರಿಗೆ ಈಗಾಗ್ಲೇ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಈ ಕೇಸ್ನಲ್ಲಿ ಸಾಕಷ್ಟು ಆಟಗಾರರು ಭಾಗಿಯಾಗಿದ್ದಾರೆ. ಆದ್ರೆ ಆರ್ ಪಿ ಸಿ ಸೆಕ್ಷನ್ ಪ್ರಕಾರ ಭಾಗಿಯಾದ ಆಟಗಾರರು ಪೊಲೀಸರ ತನಿಖೆಗೆ ಸಹಾಯ ಮಾಡಿ ಪೊಲೀಸರು ಹುಡುಕಿಕೊಂಡು ಬರುವುವರಿಗೆ ಕಾಯದೆ ಆಟಗಾರರು ತಪ್ಪೊಪ್ಪಿಕೊಂಡ್ರೆ ಅಂತವರನ್ನ ವಿಟ್ನೆಸ್ ಆಗಿ ಇಟ್ಟುಕೊಳ್ಳಲು ನಿರ್ಧರಿಸಿದ್ದೇವೆ. ಹಾಗೆ ಒಂದು ವೇಳೆ ಗಂಭೀರವಾಗಿ ಭಾಗಿಯಾಗಿದ್ದರೆ ಅಂತವರಿಗೆ ತನಿಖೆಯಲ್ಲಿ ವಿನಾಯಿತಿ ನೀಡಲಾಗುವುದು ಎಂದಿದ್ದಾರೆ.
ಮತ್ತೊಂದೆಡೆ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಕ್ರಿಕೆಟ್ ಮೊದಲು ಪಾರದರ್ಶಕವಾಗಿ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಟ್ರಾವೆಲ್ ಏಜೆನ್ಸಿ, ಬಟ್ಟೆ ವ್ಯಾಪರ ಮಾಡ್ತಿದ್ದವರು ಕ್ರಿಕೆಟ್ ತಂಡದ ಮಾಲೀಕರು, ಮ್ಯಾನೇಜ್ಮೆಂಟ್, ಕೋಚ್ ಗಾರರು ಆಗಿದ್ದಾರೆ. ಇವರೆಲ್ಲರು ಈ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವುದು ನಿಜಕ್ಕೂ ಆತಂಕಕಾರಿ ಎಂದಿದ್ದಾರೆ.