ಬೆಂಗಳೂರು: ಇಡೀ ದೇಶದಲ್ಲಿ ಭಯದ ವಾತಾವರಣ ಇದೆ. ಕೊರೊನಾ ಎರಡನೇ ಅಲೆ ಜನ ಸಾಮಾನ್ಯರನ್ನು ತತ್ತರಿಸಿ ಹೋಗುವಂತೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ತಮ್ಮ ಬೆಂಗಳೂರು ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಸರ್ಕಾರದ ಅಪರಾಧಿತನದಿಂದ ಈ ಸಂಕಟ ಬಂದಿದೆ. ಜನರು ಹಾದಿ ಬೀದಿಯಲ್ಲಿ ಸಾಯುತ್ತಿದ್ದಾರೆ. ಜಗತ್ತಿನಲ್ಲಿ ಎಲ್ಲ ದೇಶದಲ್ಲಿ ಇದೆ ಆದ್ರೆ ನಮ್ಮ ದೇಶ ಸೋಂಕು, ಸಾವಿನಲ್ಲಿ ಮುಂದಿದೆ. 12 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಇವಕ್ಕೆಲ್ಲಾ ಏನ್ ತಯಾರಿ ಮಾಡಿಕೊಳ್ಳಲಾಗಿದೆ. ಇವರ ಬಳಿ ಪೂರ್ವ ಸಿದ್ದತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೀದರ್ನಲ್ಲಿ 13 ಸಾವಿರ ಜನರಿಗೆ ಸೋಂಕು ಇದೆ. 200 ಜನ ಸತ್ತಿದ್ದಾರೆ. 500 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರ ಮಾಹಿತಿ ಸಿಗ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ನಮ್ಮ ಕಡೆಯಿಂದ ಎಲ್ಲಾ ಸಹಕಾರ ಸರ್ಕಾರಕ್ಕೆ ಇದೆ. ನೀವು ಸರಿಯಾಗಿ ಮಾಡಲಿಲ್ಲ ಅಂದ್ರೆ ಜನರ ಶಾಪ ತಟ್ಟುತ್ತೆ. ನಮ್ಮಲ್ಲಿ ಔಷಧ ತಯಾರು ಮಾಡುವ ಎಲ್ಲಾ ವ್ಯವಸ್ಥೆ ಇದೆ. ನಮಗೆ ಔಷಧದ ಅವಶ್ಯಕತೆ ಇದೆ. ಆದ್ರೆ ನೀವು ಬೇರೆ ದೇಶಕ್ಕೆ ಕಳಿಸುತ್ತಿದ್ದೀರಾ? ನಮ್ಮ ಮನೆಗಳನ್ನು ಸುಟ್ಟು ಬೇರೆಯವರ ಮನೆ ಬೆಳಗಿಸುತ್ತಿದ್ದೀರಾ? ಔಷಧ, ಆಕ್ಸಿಜನ್ ಇಲ್ಲದಿರುವುದಕ್ಕೆ ನೇರ ಸರ್ಕಾರ ಹೊಣೆ. ಸರ್ಕಾರಿ ಆಸ್ಪತ್ರೆ ಯಲ್ಲಿ ಔಷಧ ತೊಂದರೆ ಇದೆ. ಜನರಿಗೆ ತೊಂದರೆ ಆದ್ರೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತಾ? ಕಲ್ಯಾಣ ಕರ್ನಾಟಕವನ್ನು ಇವರು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಮಾಡುವುದಕ್ಕೆ ಹೋಗುತ್ತಾರೆ. ಅಕ್ರಮವಾಗಿ 50 ಕೋಟಿ ಹಣ ಸಂಪಾದನೆ ಮಾಡಿದ್ದನ್ನು ಹಂಚಿದ್ದಾರೆ. ರೋಗ ನಿಯಂತ್ರಣಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು. ಔಷಧ ಇಲ್ಲ, ಹಾಸಿಗೆ ಇಲ್ಲ ಅಂದರೆ ಏನು? ಮೊದಲು ಹೀಗೆ ತೊಂದರೆ ಆಗಿತ್ತು, ಇವಾಗ್ಲೂ ಹೀಗೆ ಮಾಡ್ತಿದ್ದಾರೆ. ತಜ್ಞರ ಸಲಹೆ ಪಡೆದು ನಿರ್ಧಾರ ಮಾಡಿ. ಲಾಕ್ಡೌನ್ ಮಾಡಿ, ಮಾಡಬೇಡಿ ಎಂದು ನಾನು ಹೇಳುವುದಿಲ್ಲ ಎಂದರು.
ಇದನ್ನೂ ಓದಿ: ಕೊರೊನಾ 2ನೇ ಅಲೆಗೆ ಸರ್ಕಾರವೇ ನೇರ ಹೊಣೆ, ಸರ್ಕಾರದ ಅಂಕಿ-ಅಂಶಗಳೇ ಸುಳ್ಳು : ಸಂಸದ ಡಿ ಕೆ ಸುರೇಶ್
ಹಿಂದೆ ಲಾಕ್ಡೌನ್ ಮಾಡಿದ್ರಿ, ಏನ್ ವ್ಯವಸ್ಥೆ ಮಾಡಿಕೊಂಡಿದ್ರಿ? ಇವಾಗ ಮಾಡಿದ್ರೆ ಏನ್ ವ್ಯಾಪಾರ ಮಾಡಿಕೊಂಡಿದ್ದೀರಿ? ಬಡವರ, ಜನರ ಹಿತದೃಷ್ಟಿಯಿಂದ ಕೆಲಸ ಮಾಡಿ. ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಕೊರೊನ ವಿಚಾರದಲ್ಲಿ ಉತ್ತರ ಕರ್ನಾಟಕವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಅನ್ ರಿಪೋರ್ಟ್ ಡೆತ್ ಆಗ್ತಿದ್ದಾರೆ. ಮನೆಯಲ್ಲಿ ಇದ್ದವರು ಸಾಯುತ್ತಿದ್ದಾರೆ. ಇದು ಸಮುದಾಯಕ್ಕೆ ವಿಸ್ತರಣೆ ಆಗುತ್ತಿದೆ. ಜೀವ ಇದ್ರೆ ಜಗತ್ತು ಇಲ್ಲದಿದ್ದರೆ ಏನಿಲ್ಲ ಎಂದರು.
ಚುನಾವಣೆ ಮುಂದೂಡಿ
ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ ತುಂಬಾ ಇದೆ. ಉಪ ಚುನಾವಣೆ ಅವಶ್ಯಕತೆ ಇರಲಿಲ್ಲ. ಸ್ಥಳೀಯ ಚುನಾವಣೆ ನಡೆಯುತ್ತಿರುವುದನ್ನು ಮುಂದಕ್ಕೆ ಹಾಕಿ. ಚುನಾವಣೆ ಅಂದ್ರೆ ಜನ ಬರುತ್ತಾರೆ, ಜನ ಸೇರುತ್ತಾರೆ. ಎಲ್ಲಾ ಸ್ಥಳೀಯ ಸಂಸ್ಥೆಯ ಚುನಾವಣೆ ಮುಂದೂಡಿಕೆ ಮಾಡಿ ಎಂದು ಆಗ್ರಹಿಸಿದರು.
ಭಾವುಕರಾದ ಖಂಡ್ರೆ
ದಯವಿಟ್ಟು ಕೊರೊನ ನಿರ್ಲಕ್ಷ್ಯ ಮಾಡಬೇಡಿ ಎಂದು ಕೈ ಮುಗಿದ ಈಶ್ವರ್ ಖಂಡ್ರೆ, ಸಾರ್ವಜನಿಕರಿಗೆ ನಾನು ಪ್ರಾರ್ಥನೆ ಮಾಡುತ್ತೇನೆ. ನನಗೆ ಎರಡನೇ ಅಲೆ ಕೋವಿಡ್ ಅಟ್ಯಾಕ್ ಆಗಿತ್ತು. ನಾನು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ. ದಯವಿಟ್ಟು ಜನರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಕೊರೊನಾವನ್ನು ನಿರ್ಲಕ್ಷ್ಯ ಮಾಡಬೇಡಿ. ಮಾಸ್ಕ್ ಹಾಕಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಕೈನಲ್ಲಿ ಇದೆ. ಎಲ್ಲರೂ ಎಚ್ಚರಿಕೆ ವಹಿಸಬೇಕು. ಸರ್ಕಾರ ಕೈ ಚೆಲ್ಲಿ ಕೂತಿದೆ. ಜನರೇ ದಯವಿಟ್ಟು ಕೊರೊನ ನಿರ್ಲಕ್ಷ್ಯ ಮಾಡಬೇಡಿ ಎಂದು ಭಾವುಕರಾಗಿ ನುಡಿದರು.
ಇದನ್ನೂ ಓದಿ: ಒಬ್ಬ ಸೆಲೆಬ್ರಿಟಿಯಾಗಿ ನನಗೇ ಆಕ್ಸಿಜನ್ ಸಿಗಲಿಲ್ಲ.. ಸೋಂಕಿತರ ಸ್ಥಿತಿ ಹತ್ತಿರದಿಂದ ಕಂಡೆ.. ನಟ ಸಾಧುಕೋಕಿಲ