ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸಂಜೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಜತೆ ಸಮಾಲೋಚನೆ ನಡೆಸಿದರು.
ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಧೃವನಾರಾಯಣ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್. ಸುದರ್ಶನ್ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸಭೆಯಲ್ಲಿದ್ದರು.
ಪ್ರದೇಶ ಕಾಂಗ್ರೆಸ್ ಸಮಿತಿಯ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸುವ ಕಾರ್ಯಕ್ಕೆ ಅತ್ಯಂತ ಶೀಘ್ರವೇ ಚಾಲನೆ ನೀಡಬೇಕಾಗಿದೆ. ಮುಂಬರುವ ಉಪಚುನಾವಣೆಗಳು ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಿದ್ದಗೊಳಿಸಬೇಕಾಗಿದೆ.
ಈ ಹಿನ್ನೆಲೆ ಆದಷ್ಟು ಶೀಘ್ರವಾಗಿ ಪಕ್ಷದ ವಿವಿಧ ಸಮಿತಿಗಳನ್ನು ಬಲಗೊಳಿಸುವ ಹಾಗೂ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ನೀಡುವ ಮೂಲಕ ಅವರನ್ನು ಉತ್ತೇಜಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಕೈಗೊಳ್ಳಬಹುದಾದ ತೀರ್ಮಾನಗಳು ಹಾಗೂ ನಿಲುವುಗಳ ಕುರಿತು ಅತ್ಯಂತ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಡಿಕೆಶಿ ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಜನರಿಗೆ ಬಿಜೆಪಿ ಸರ್ಕಾರದ ಮೇಲಿನ ನಂಬಿಕೆ ಕಡಿಮೆಯಾಗಿದೆ. ಜನರಿಗೆ ಇರುವ ಏಕೈಕ ನಿರೀಕ್ಷೆ ಹಾಗೂ ಅದನ್ನು ಈಡೇರಿಸುವ ಸಾಮರ್ಥ್ಯ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಜನ ನಮ್ಮನ್ನ ಆಶೀರ್ವದಿಸಲು ಸಿದ್ಧರಿದ್ದಾರೆ. ನಾವು ಈ ಹಿಂದೆ ನೀಡಿದ ಕಾರ್ಯಕ್ರಮಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಪಕ್ಷದ ಸಾಮಾಜಿಕ ಜಾಲತಾಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಬಿಜೆಪಿ ಜನರನ್ನು ಮರುಳು ಮಾಡಲು ನಡೆಸುತ್ತಿರುವ ಯತ್ನಗಳನ್ನು ನಾವು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ವಿವರಿಸುವ ಕಾರ್ಯ ಮಾಡಬೇಕಿದೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಅತ್ಯಂತ ಪ್ರಮುಖವಾದದ್ದು ಎಂದು ವಿವರಿಸಿದ್ದಾರೆ ಎನ್ನಲಾಗಿದೆ.