ದೇವನಹಳ್ಳಿ: ದೇಶದೆಲ್ಲೆಡೆ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದು ಲಾಕ್ಡೌನ್ ಜಾರಿಯಲ್ಲಿದೆ. ಇದರ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಪೊಲೀಸರಿಗಾಗಿ ಕೆಐಎಎಲ್ ಸಿಬ್ಬಂದಿ ಪ್ರತಿನಿತ್ಯ ಊಟ ನೀಡಲು ಮುಂದಾಗಿದ್ದಾರೆ.
ಪ್ರತಿದಿನ 12 ಸಾವಿರ ಊಟ ವಿತರಣೆಗೆ ಕೆಐಎಎಲ್ ಸಿಬ್ಬಂದಿ ತಯಾರಿ ನಡೆಸುತ್ತಿದ್ದಾರೆ. ರಾತ್ರಿ-ಹಗಲು ಎನ್ನದೆ ದುಡಿಯುವವರಿಗೆ ರುಚಿಯಾದ ಊಟ ನೀಡುವ ನಿಟ್ಟಿನಲ್ಲಿ ಮಧ್ಯಾಹ್ನದ ಊಟಕ್ಕೆ 6 ಸಾವಿರ ಹಾಗೂ ರಾತ್ರಿ ಊಟಕ್ಕೆ 6 ಸಾವಿರ ಊಟದ ಜೊತೆ ಬಾಳೆಹಣ್ಣು, ನೀರಿನ ಬಾಟಲ್ ಹಾಗೂ ಒಂದು ಸಿಹಿ ತಿನಿಸು ನೀಡುತ್ತಿದ್ದಾರೆ.
ಕೆ.ಐ.ಎ.ಎಲ್ನ ಸುಮಾರು 40 ಅಧಿಕಾರಿಗಳು ಹಾಗೂ 140ಕ್ಕೂ ಹೆಚ್ಚು ಸಹೋದ್ಯೋಗಿಗಳು ಐದು ಅಡುಗೆ ಕೋಣೆಗಳಲ್ಲಿ 100ಕ್ಕೂ ಹೆಚ್ಚು ಬಾಣಸಿಗರ ಜೊತೆ ಕೆಲಸ ಮಾಡುತ್ತಿದ್ದಾರೆ. ಗೌರಿಬಿದನೂರು 1000, ಚಿಕ್ಕಬಳ್ಳಾಪುರ 1000, ವಿಕ್ಟೋರಿಯಾ ಆಸ್ಪತ್ರೆಗೆ 500 ಊಟ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಹಾಗೂ ನಿರಾಶ್ರಿತರಿಗೆ ಊಟ ತಲುಪಿಸುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
ಇನ್ನು ಆಹಾರ ತಯಾರಿಕೆಗಾಗಿ ನುರಿತ ಬಾಣಸಿಗರ ಜೊತೆ ಕೆಲಸ ಮಾಡುತ್ತಿರುವ ಕೆ.ಐ.ಎ.ಎಲ್ ಸಿಬ್ಬಂದಿ ತಮ್ಮ ಸಂಬಳದ ಸ್ವಲ್ಪ ಹಣ ಮುಡಿಪಾಗಿಟ್ಟಿದ್ದು, ಕೆ.ಐ.ಎ.ಎಲ್ ಸಿಬ್ಬಂದಿಯ ಉದಾರತೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.