ಬೆಂಗಳೂರು: ರಾಜ್ಯ ಸರ್ಕಾರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶವನ್ನು ಹೊರಡಿಸಿದೆ. ಆ ಮೂಲಕ ಖಾಸಗಿ ಬಡಾವಣೆ ಡೆವಲಪರ್ಸ್ಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಕರ್ನಾಟಕ ಪಟ್ಟಣ ಹಾಗೂ ಗ್ರಾಮಾಂತರ ಯೋಜನೆಗೆ (ತಿದ್ದುಪಡಿ) ಮೊನ್ನೆ ನಡೆದ ಸಂಪುಟ ಸಭೆ ಅಸ್ತು ನೀಡಿತ್ತು. ಇದೀಗ ರಾಜ್ಯಪಾಲರು ತಿದ್ದುಪಡಿ ಸುಗ್ರೀವಾಜ್ಞೆಗೆ ತಮ್ಮ ಅಂಕಿತ ಹಾಕಿದ್ದಾರೆ.

ಲಾಕ್‌ಡೌನ್ ವೇಳೆ ಸಂಕಷ್ಟಕ್ಕೊಳಗಾಗಿರುವ ಲೇಔಟ್ ಡೆವಲಪರ್ಸ್ಗಳಿಗೆ ತಮ್ಮ ಬಡಾವಣೆಯಲ್ಲಿನ ನಿವೇಶನಗಳನ್ನು ಮಾರಾಟ ಮಾಡಲು ಇನ್ನು ಮುಂದೆ ತಮ್ಮ ಬಡಾವಣೆಯ ಪೂರ್ತಿ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಅಗತ್ಯ ಇಲ್ಲ. ಈ ಆಧ್ಯಾದೇಶದ ಮೂಲಕ ಅಭಿವೃದ್ಧಿಯಾದ ಪ್ರದೇಶವನ್ನು ಹಂತ ಹಂತವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಮೂಲ ಕಾಯ್ದೆ ಪ್ರಕಾರ ಬಡಾವಣೆ ಅಭಿವೃದ್ಧಿಗೊಳಿಸಿ ಯೋಜನಾ ಅನುಮೋದನೆ ಪಡೆದ ಬಳಿಕ ಪೂರ್ತಿ ಬಡಾವಣೆಯ ಸಂಪೂರ್ಣ ಮೂಲಸೌಕರ್ಯ ಅಭಿವೃದ್ಧಿಗೊಳಿಸದ ಹೊರತು ನಿವೇಶನವನ್ನು ಮಾರಾಟ ಮಾಡುವ ಹಾಗಿರಲಿಲ್ಲ. ಈಗ ಅದಕ್ಕೆ ತಾತ್ಕಾಲಿಕ ಸಡಿಲಿಕೆ ಮಾಡಲಾಗಿದೆ.

ಈ ಹೊಸ ಸುಗ್ರೀವಾಜ್ಞೆ ಪ್ರಕಾರ ಬಡಾವಣೆ ಪ್ರದೇಶವನ್ನು ಬ್ಲಾಕ್ಗಳನ್ನಾಗಿ ವಿಂಗಡಿಸಿ ನಿವೇಶನಗಳನ್ನು ಮೂರು ಹಂತಗಳಲ್ಲಿ ಮಾರಾಟ ಮಾಡಬಹುದಾಗಿದೆ. ಮೊದಲ ಹಂತದಲ್ಲಿ 40% ನಿವೇಶನ ಮಾರಾಟ ಮಾಡಬಹುದು. ಎರಡನೇ ಹಂತದಲ್ಲಿ 30% ಮತ್ತು ಮೂರನೇ ಹಂತದಲ್ಲಿ ಉಳಿದ ನಿವೇಶನಗಳನ್ನು ಮಾರಾಟ ಮಾಡಬಹುದಾಗಿದೆ.
ಅದರಂತೆ 40% ಪ್ರದೇಶದ ನಿವೇಶನ ಮಾರಾಟ ಮಾಡುವ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಸಂಪೂರ್ಣವಾಗಿ ಅಭಿವೃದ್ಧಿಯಾಗಿರಬೇಕು. ಅದೇ ರೀತಿ ಎರಡು ಮತ್ತು ಮೂರನೇ ಹಂತಗಳಲ್ಲಿನ 30% ಬ್ಲಾಕ್ ಪ್ರದೇಶದಲ್ಲಿನ ನಿವೇಶನಗಳ ಮಾರಾಟ ಮಾಡಲು ಆ ವ್ಯಾಪ್ತಿಯ ಮೂಲಸೌಕರ್ಯ ಸಂಪೂರ್ಣವಾಗಿ ಅಭಿವೃದ್ಧಿಯಾಗಿರಬೇಕು.
ಪೂರ್ಣಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿ ಏನು?
- ಪಾದಚಾರಿ ಮಾರ್ಗ, ಮಳೆ ನೀರು ಚರಂಡಿಯೊಂದಿಗೆ ರಸ್ತೆ, ಒಳಚರಂಡಿ ಮಾರ್ಗ
- ನೀರು ಸರಬರಾಜು ಪೈಪ್ ಲೈನ್, ನೀರಿನ ಟ್ಯಾಂಕ್ ನಿರ್ಮಾಣ
- ತ್ಯಾಜ್ಯ ಸಂಸ್ಕರಣಾ ಘಟಕ, ಉದ್ಯಾನ, ಆಟದ ಮೈದಾನ
- ವಿದ್ಯುಚ್ಛಕ್ತಿ ಕಾಮಗಾರಿ, ಮಳೆ ನೀರು ಕೊಯ್ಲು, ಮರ ನೆಡುವುದು