ಬೆಂಗಳೂರು: ಪೆರೋಲ್ ಮೇಲೆ ಹೊರಬಂದು ತಪ್ಪಿಸಿಕೊಳ್ಳುವ ಕೈದಿಗಳಿಗೆ ಜಾಮೀನು ನೀಡಿದ್ದ ಜಾಮೀನುದಾರ ಜಮೀನು ಮುಟ್ಟುಗೋಲು ಹಾಕಿಕೊಳ್ಳುವ ಅಂಶ ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗ ನಡೆಸಿವೆ. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ಕರ್ನಾಟಕ ಬಂಧಿಖಾನೆಗಳ ತಿದ್ದುಪಡಿ ವಿಧೇಯಕ-2022 ಅನ್ನು ವಿಧಾನ ಪರಿಷತ್ ಅಂಗೀಕರಿಸಿತು. ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಬಂಧಿಖಾನೆಗಳ ತಿದ್ದುಪಡಿ ವಿಧೇಯಕ-2022 ಅನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದರು.
ಪೆರೋಲ್ ಸೆಕ್ಷನ್ ಬಿಗಿ ಮಾಡುವ ಅಗತ್ಯವಿದೆ. ಜೈಲಿನಲ್ಲಿ ಮೊಬೈಲ್ ಸೀಜ್ ಮಾಡಿ ಸುಮ್ಮನಾಗದೆ, ಕೇಸ್ ಹಾಕಲಾಗುತ್ತದೆ. ಅದಕ್ಕಾಗಿ ತಿದ್ದುಪಡಿ ತರಲಾಗಿದೆ ಎಂದು ಬಿಲ್ಗೆ ಅಂಗೀಕಾರ ನೀಡುವಂತೆ ಸದನಕ್ಕೆ ಮನವಿ ಮಾಡಿದರು. ಬಿಲ್ ಮೇಲೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಈ ಮಸೂದೆ ನೋಡಿದರೆ ಗೃಹ ಸಚಿವಾಲಯದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.
ಅಧಿಕಾರಿಗಳಿಗೆ ಏನು ಕ್ರಮ?: ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ನಿರ್ವಾಣ ಸ್ಥಿತಿಯಲ್ಲಿ ಕೈದಿಗಳನ್ನು ಒಳಗೆ ಕಳಿಸಲಾಗುತ್ತದೆ. ನಾವು ಜೈಲಿಗೆ ಹೋದಾಗ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡಿ ಒಳಗೆ ಕಳುಹಿಸಿದ್ದರು. ಆದರೂ ಜೈಲಿನೊಳಗೆ ಫೋನ್, ಗಾಂಜಾ ಹೇಗೆ ಸಿಗುತ್ತದೆ?.
ಕೆಲ ವರ್ಷಗಳ ಹಿಂದೆ ವಿಐಪಿ ಸವಲತ್ತು ಕಲ್ಪಿಸಿರುವ ಕುರಿತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳೇ ಬಹಿರಂಗ ಆರೋಪ-ಪ್ರತ್ಯಾರೋಪ ಮಾಡಿದ್ದರು. ಕೈದಿಗಳಲ್ಲಿ ಮೊಬೈಲ್ ಸಿಕ್ಕರೆ ಅವರಿಗೆ ದಂಡ ಸರಿ. ಆದರೆ ಅಧಿಕಾರಿಗಳಿಗೆ ಏನು ಕ್ರಮ?. ಅಧಿಕಾರಿಗಳಿಗೂ ಕಠಿಣ ಕ್ರಮ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರಾಮಾಣಿಕರು ಮೂಲೆ ಗುಂಪು: ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಬಂಧಿಖಾನೆ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಆದರೆ ಅವರನ್ನು ಮೂಲೆಗೆ ವರ್ಗಾವಣೆ ಮಾಡಿದರು. ಪ್ರಾಮಾಣಿಕರನ್ನು ಮೂಲೆ ಗುಂಪು ಮಾಡಲಾಗುತ್ತದೆ. ರೂಪಾ ವರದಿ ಮೇಲೆ ಬಂಧಿಖಾನೆ ಸುಧಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಜಮೀನು ಮುಟ್ಟುಗೋಲು ಸರಿಯಲ್ಲ: ನ್ಯಾಯಾಲಯ ಹೇಳಿದೆ ಎಂದು ಈಗ ತಿದ್ದುಪಡಿ ತರುತ್ತಿದ್ದೀರಿ. ಯಾರೂ ಪೆರೋಲ್ಗೆ ಜಾಮೀನು ಕೊಡಬಾರದು ಎಂದು ಪೆರೋಲ್ಗೆ ಜಾಮೀನು ನೀಡುವವರ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಹೊರಟಿರುವುದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಗಳಿಗೆ ಬೇಕಾದರೆ ಜೀವಾವಧಿ ಶಿಕ್ಷೆ ಎಂದು ತನ್ನಿ. ಆಗ ಅಪರಾಧಗಳು ನಿಲ್ಲುತ್ತವೆ. ಅದನ್ನು ಬಿಟ್ಟು ಪೆರೋಲ್ ಜಾಮೀನುದಾರರ ಜಮೀನು ಮುಟ್ಟುಗೋಲು ಸರಿಯಲ್ಲ ಎಂದರು.
ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಮಾತನಾಡಿ, ಜೈಲಿನಲ್ಲಿ ಲಾಂಗು, ಮಚ್ಚುಗಳು ಸಿಗುತ್ತಿವೆ. ಹೊರಗಿನ ರೀತಿ ರೌಡಿಸಂ ನಡೆಯುತ್ತಿದೆ. ಇದೆಲ್ಲಾ ಹೇಗೆ ಸಾಧ್ಯ?. ಇದಕ್ಕೆ ಯಾರು ಕಾರಣ? ಇದರ ಬಗ್ಗೆಯೂ ಚಿಂತನೆ ಅಗತ್ಯ ಎಂದರು. ಕಾಂಗ್ರೆಸ್ ಸದಸ್ಯ ನಜೀರ್ ಅಹಮ್ಮದ್ ಮಾತನಾಡಿ, ಪೆರೋಲ್ಗೆ ಬೇಲ್ ಕೊಡಲು ಮಧ್ಯವರ್ತಿಗಳಿದ್ದಾರೆ. ಬೇಲ್ಗಳು ಮಾರಾಟಕ್ಕಿವೆ. ₹5 ಸಾವಿರ ಕೊಟ್ಟರೆ ಬೇಲ್ಗೆ ಆಸ್ತಿ ಪತ್ರದ ದಾಖಲೆ ಕೊಡುವ ವ್ಯವಸ್ಥೆ ಇದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯ ಪ್ರಾಣೇಶ್ ಮಾತನಾಡಿ, ಜೈಲಿನಲ್ಲಿ ಆಡಳಿತ ನಡೆಸುವವರು ಕೈದಿಗಳಾಗಿದ್ದಾರೆ. ಮೊಬೈಲ್ ಜಾಮರ್ ಹಾಕಿ, ತುರ್ತು ಸಂಪರ್ಕಕ್ಕೆ ಲ್ಯಾಂಡ್ ಲೈನ್ ಇದೆ. ಅಗತ್ಯವಿದ್ದಾಗ ಬಳಸಬಹುದು ಎಂದು ಸಲಹೆ ನೀಡಿ ಬಿಲ್ನ್ನು ಸ್ವಾಗತಿಸಿದರು. ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಘೋರ ಅಪರಾಧ ಮಾಡಿದವರನ್ನು ಸಾಮಾನ್ಯ ಅಪರಾಧಿಗಳನ್ನು ಒಟ್ಟಿಗೆ ಇಡಬಾರದು. ಎಲ್ಲಾ ಪ್ರತ್ಯೇಕ ಇಡಬೇಕು ಎಂಬ ಸಲಹೆ ನೀಡಿ ಬಿಲ್ ಸ್ವಾಗತಿಸಿದರು.
ಕಾಂಗ್ರೆಸ್‌ನ ಗೋವಿಂದರಾಜು ಮಾತನಾಡಿ, ಹಿಂದೆ ಜೈಲು ಸುಧಾರಣಾ ಸಮಿತಿ ಸಕ್ರಿಯವಾಗಿತ್ತು. ಈಗ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮೊದಲು ಅದನ್ನು ಸರಿಪಡಿಸಬೇಕು. ಕಾಲ-ಕಾಲಕ್ಕೆ ಜೈಲಿಗೆ ಭೇಟಿ ನೀಡಿ ಸಮಿತಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಸದನಕ್ಕೆ ಗೃಹ ಸಚಿವರ ವಿವರ: ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಂಧಿಖಾನೆ ಸಿಬ್ಬಂದಿ ತಪ್ಪು ಮಾಡಿದರೆ ದಂಡ ಕಟ್ಟಿ ಜೈಲುವಾಸ ತಪ್ಪಿಸಿಕೊಳ್ಳುವ ಅವಕಾಶ ಇಲ್ಲಿಯವರೆಗೂ ಇತ್ತು. ಈಗ ಅದಕ್ಕೆ ತಿದ್ದುಪಡಿ ತರಲಾಗುತ್ತಿದೆ. ಇನ್ಮುಂದೆ ತಪ್ಪಿತಸ್ಥ ಸಿಬ್ಬಂದಿ ಸಮವಸ್ತ್ರ ಬಿಚ್ಚಿ ಕೈದಿ ಜತೆ ಇರಬೇಕು, ದಂಡ ಕಟ್ಟಿ ಬಚಾವಾಗಲು ಅವಕಾಶ ಇಲ್ಲದ ರೀತಿಯ ತಿದ್ದುಪಡಿ ಬಿಲ್ನಲ್ಲಿದೆ ಎಂದರು.
ಪೆರೋಲ್ ಮೇಲೆ ಹೊರಬರುವ ಕೈದಿಗಳು ತಲೆಮರೆಸಿಕೊಂಡರೆ ಜಾಮೀನುದಾರರ ಜಮೀನು ಮುಟ್ಟುಗೋಲು ಹಾಕಿಕೊಳ್ಳುವ ಅಂಶಕ್ಕೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಯಾರೂ ಸಹ ಉದ್ದೇಶ ಪೂರ್ವಕವಾಗಿ ಕೈದಿಗಳು ತಪ್ಪಿಸಿಕೊಳ್ಳಲು ಸಹಕಾರವಾಗಲು ಜಾಮೀನು ಕೊಡುತ್ತಾರೋ ಅವರಿಗೆ ಕಡಿವಾಣ ಹಾಕಲು ಈ ತಿದ್ದುಪಡಿ ತರಲಾಗಿದೆ ಎಂದು ವಿಧೇಯಕವನ್ನು ಸಮರ್ಥಿಸಿಕೊಂಡರು.
173 ಜನ ಪೆರೋಲ್ ಮೇಲೆ ಹೊರಬಂದು ಕಾಣೆಯಾಗಿದ್ದಾರೆ. ಅದರಲ್ಲಿ 158 ಸಿಕ್ಕಿದ್ದಾರೆ, 15 ಜನ ಇನ್ನೂ ಸಿಕ್ಕಿಲ್ಲ. ಇಡೀ ವ್ಯವಸ್ಥೆ ಸರಿಯಾಗಿದ್ದರೆ ನಮಗೆ ಜೈಲು ಬೇಡ, ಬೇಲೂ ಬೇಡ. ಬೇಲಿಯೇ ಎದ್ದು ಹೊಲ ಮೇದಂತೆ ಸಜ್ಜನರು ಎಂದೇ ಸಿಬ್ಬಂದಿಯನ್ನು ಜೈಲಿಗೆ ನೇಮಿಸಿದ್ದೇವೆ. ಆದರೂ ಅಲ್ಲಿ ದುರುಪಯೋಗ ನಡೆಯುತ್ತಿದೆ. ಹಾಗಾಗಿ ಮೂಲ ಕಾಯ್ದೆಗೆ ಸಣ್ಣ ತಿದ್ದುಪಡಿ ತರುತಿದ್ದೇವೆ ಅಷ್ಟೇ, ಹೊಸದೇನು ಇಲ್ಲ. ಈಗಾಗಲೇ ಜೈಲು ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಿಲ್ಗೆ ಅನುಮತಿ ನೀಡುವಂತೆ ಮನವಿ: ಕೇಂದ್ರೀಯ ಬಂಧಿಖಾನೆಗೆ ಸಿಎಎಸ್ಎಫ್ ಪಡೆ ಹಾಕಲಾಗಿದೆ. ಎಲ್ಲಾ ಜೈಲಿನಲ್ಲಿಯೂ ಹಾಕಲು ಚಿಂತನೆ ನಡೆಸಲಾಗಿದೆ. ಜೈಲುಗಳಲ್ಲಿ ಜಾಮರ್ ಅಳವಡಿಸಲು ಬಜೆಟ್ನಲ್ಲಿ ಹಣ ಮೀಸಲಿರಿಸಲಾಗಿದೆ. ಇದಕ್ಕೆ 50-60 ಕೋಟಿ ಬೇಕಿದೆ. ಜೈಲಿನಿಂದ ಕೋರ್ಟ್ಗೆ ಆರೋಪಿಗಳನ್ನು ಕರೆದೊಯ್ಯುವುದನ್ನು ತಪ್ಪಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರು ಪಡಿಸಲಾಗುತ್ತದೆ ಎಂದು ಸುಧಾರಣೆ ಕುರಿತು ವಿವರಣೆ ನೀಡಿದರು. ಅಂತಿಮವಾಗಿ ಯಾರು ಪ್ರಾಮಾಣಿಕವಾಗಿ ಜಾಮೀನು ನೀಡುತ್ತಾರೋ ಅವರಿಗೆ ಸಮಸ್ಯೆಯಾಗಲ್ಲ. ಬಂಧಿಖಾನೆ ವ್ಯವಸ್ಥೆಗೆ ಶಕ್ತಿ ತರಲು ತಂದಿರುವ ತಿದ್ದುಪಡಿ ಇದಾಗಿ. ಹಾಗಾಗಿ ಬಿಲ್ ಗೆ ಅನುಮತಿ ನೀಡಿ ಎಂದು ಸದನಕ್ಕೆ ಮನವಿ ಮಾಡಿದರು.
ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು. ಜಾಮೀನು ವಿಚಾರದಲ್ಲಿ ಯೋಚಿಸಿ ಎಂದಿದ್ದೆವು. ಲಕ್ಷಾಂತರ ಮಂದಿ ಕೈದಿಗಳಿದ್ದರೂ ತಪ್ಪಿಸಿಕೊಂಡವರು ಗೃಹ ಸಚಿವರೇ ಹೇಳಿದಂತೆ ಕೇವಲ 178 ರಷ್ಟು ಮಾತ್ರ. ಅಷ್ಟು ಸಣ್ಣ ಕಾರಣಕ್ಕೆ ಎಲ್ಲರಿಗೂ ಕಠಿಣ ಕಾನೂನು ಅನ್ವಯ ಸಲ್ಲದು ಎಂದು ಬಿಲ್ಗೆ ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ಉತ್ತರ ಖಂಡಿಸಿ ಸಭಾತ್ಯಾಗ ಮಾಡಿದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೂಡ ಬಿಲ್ ವಿರೋಧಿಸಿದರು.ಇದು ಜನವಿರೋಧಿ ಬಿಲ್ ಆಗಿದೆ. ಹಾಗಾಗಿ ನಾವೂ ಸಭಾತ್ಯಾಗ ಮಾಡುತ್ತೇವೆ ಎಂದು ಪ್ರಕಟಿಸಿ ಹೊರನಡೆದರು.
ಸಭಾತ್ಯಾಗದ ವೇಳೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಜನವಿರೋಧಿ ಬಿಲ್ ಎನ್ನುವ ಘೋಷಣೆ ಕೂಗಿದ್ದಕ್ಕೆ ಪ್ರತಿಯೊಬ್ಬ ಬಿಜೆಪಿ ಸದಸ್ಯರು ಇದು ಅಪರಾಧಿ ವಿರೋಧಿ ಬಿಲ್ ಎಂದು ಸಮರ್ಥಿಸಿಕೊಂಡರು. ನಂತರ ಕಾಂಗ್ರೆಸ್ ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ 'ಕರ್ನಾಟಕ ಬಂಧಿಖಾನೆಗಳ ತಿದ್ದುಪಡಿ ವಿಧೇಯಕ-2022'ಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.
ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆ: ವಿಪಕ್ಷ ನಾಯಕ ಸಿದ್ದರಾಮಯ್ಯ