ಬೆಂಗಳೂರು: ಅತಿವೃಷ್ಟಿ ಹಾಗೂ ಪ್ರವಾಹದಿಂದ ಗೃಹೋಪಯೋಗಿ ವಸ್ತು, ಬಟ್ಟೆ-ಬರೆ ಹಾನಿ ಹಾಗೂ ಮನೆ ಹಾನಿಗೆ ಹೆಚ್ಚುವರಿ ಪರಿಹಾರ ಹಣ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರಾವಳಿ ಕರ್ನಾಟಕ, ಕೊಡಗು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವರು ಸಂತ್ರಸ್ತರಾಗಿದ್ದಾರೆ.
ಮಳೆ ಹಾನಿ ವೀಕ್ಷಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರ ಜೊತೆಗೂಡಿ ಮಳೆ ಬಾಧಿತ ಪ್ರದೇಶಗಳ ಪ್ರವಾಸದಲ್ಲಿ ಇದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನೆರೆ ಪರಿಹಾರವಾಗಿ ಎನ್ ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ಪರಿಹಾರ ಹಣ ನೀಡಲು ನಿರ್ಧರಿಸಿದೆ.
ಪರಿಹಾರದ ವಿವರ:
- ಜೀವ ಹಾನಿಗೆ ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಡಿ 4 ಲಕ್ಷ ರೂ. ಪರಿಹಾರ ಜೊತೆ ರಾಜ್ಯ ಸರ್ಕಾರ ಹೆಚ್ಚುವರಿ 1 ಲಕ್ಷ ರೂ. ಪರಿಹಾರ ಸೇರಿ 5 ಲಕ್ಷ ರೂ. ಪರಿಹಾರ ಹಣ ನೀಡಲಿದೆ.
- ನೀರು ನುಗ್ಗಿ ಗೃಹೋಪಯೋಗಿ ವಸ್ತು, ಬಟ್ಟೆ-ಬರೆ ಹಾನಿಗೆ ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಡಿ 3,800 ರೂ. ಪರಿಹಾರ ಜತೆಗೆ ರಾಜ್ಯ ಸರ್ಕಾರದ ಹೆಚ್ಚುವರಿ 6,200 ರೂ. ಪರಿಹಾರದೊಂದಿಗೆ 10,000 ರೂ. ಪರಿಹಾರ.
- ಶೇ.75ಕ್ಕಿಂತ ಹೆಚ್ಚಿಗೆ ಮನೆ ಹಾನಿಯಾದವರಿಗೆ ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಡಿ ಕೊಡುವ 95,100ರೂ. ಜೊತೆಗೆ ರಾಜ್ಯದ ಹೆಚ್ಚುವರಿ ಪರಿಹಾರ 4,04,900ರೂ. ನೊಂದಿಗೆ ಒಟ್ಟು 5 ಲಕ್ಷ ರೂ. ನೀಡಲು ನಿರ್ಧರಿಸಿದೆ.
- 25%-75% ಮನೆ ಹಾನಿಯಾದವರಿಗೆ (ಕೆಡವಿ ಹೊಸದಾಗಿ ಕಟ್ಟುವವರಿಗೆ) ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಡಿ ಕೊಡುವ 95,100ರೂ. ಜೊತೆಗೆ ರಾಜ್ಯದ ಹೆಚ್ಚುವರಿ ಹಣ 4,04,900 ರೂ. ನೊಂದಿಗೆ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಿದೆ.
- 25%-75% ಮನೆ ಹಾನಿಯಾದವರಿಗೆ (ದುರಸ್ತಿಗಾಗಿ) ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಡಿ ಕೊಡುವ 95,100ರೂ. ಜೊತೆಗೆ ರಾಜ್ಯದ ಹೆಚ್ಚುವರಿ 2,04,900 ಲಕ್ಷ ರೂ. ಜೊತೆಗೆ ಒಟ್ಟು 3 ಲಕ್ಷ ರೂ. ಪರಿಹಾರ.
- ಅದೇ ರೀತಿ 15%-25%ರಷ್ಟು ಮನೆ ಹಾನಿಗೊಳಗಾದವರಿಗೆ ಎನ್ಡಿಆರ್ಎಫ್/ಎಸ್ಡಿಆರ್ಎಫ್ ಮಾರ್ಗಸೂಚಿಯಡಿ 5,200ರೂ. ಪರಿಹಾರ ಜೊತೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಪರಿಹಾರ ಹಣ 44,800 ರೂ. ಪರಿಹಾರ ನೀಡುವ ಮೂಲಕ ಒಟ್ಟು 50,000 ರೂ. ನೀಡಲು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಸಿಎಂರಿಂದ ಕಡಲ್ಕೊರೆತ ವೀಕ್ಷಣೆ: ಶೀಘ್ರದಲ್ಲೇ ಸೀ ವೇವ್ ಬ್ರೇಕರ್ ಅನುಷ್ಠಾನ ಭರವಸೆ