ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಅಹೋರಾತ್ರಿ ಧರಣಿ ಆರಂಭಿಸಿದ್ದು, ಎರಡು ದಿನಗಳ ಕಲಾಪ ಬಲಿಯಾಗಿದೆ. ಧರಣಿಯಲ್ಲೇ ಕಾಲ ಹರಣವಾಗುತ್ತಿರುವ ಕಲಾಪವನ್ನು ಮೊಟಕುಗೊಳಿಸುವ ಚಿಂತನೆ ಆಡಳಿತಾರೂಢ ಬಿಜೆಪಿಗೆ ಬಂದಿದ್ದು, ರಾಜಕೀಯ ಲೆಕ್ಕಾಚಾರದ ಆಧಾರದಲ್ಲಿ ಮುಂದಿನ ಹೆಜ್ಜೆ ಇರಿಸಲು ನಿರ್ಧರಿಸಿದೆ. ಹಾಗಾಗಿ ಸೋಮವಾರದ ಕಲಾಪ ಮುಗಿಯುವ ವೇಳೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡುವ ಕುರಿತು ಚಿತ್ರಣ ಸಿಗಲಿದೆ.
ಕಳೆದ ಸೊಮವಾರ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದು, ಈಗಾಗಲೇ 10 ದಿನಗಳ ಅಧಿವೇಶನದಲ್ಲಿ ಅರ್ಧ ಭಾಗ ಮುಗಿದಿದೆ. ಆದರೆ ಕಳೆದ ಎರಡು ದಿನಗಳಿಂದ ಕಲಾಪ ನಡೆಯದೆ ಬರೀ ಧರಣಿಗೆ ಸೀಮಿತವಾಗಿದೆ. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆ ಇನ್ನೂ ಆರಂಭಗೊಂಡಿಲ್ಲ. ಈಶ್ವರಪ್ಪ ಹೇಳಿಕೆ ವಿವಾದ ಕಲಾಪವನ್ನು ಸಂಪೂರ್ಣವಾಗಿ ಬಲಿ ತೆಗೆದುಕೊಂಡಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬಳ್ಳಾರಿ ಪಾದಯಾತ್ರೆಗೆ ಮೊದಲೂ ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸಿತ್ತು. ಅದೇ ರೀತಿ ಈಗಲೂ ಧರಣಿ ಮುಂದುವರಿಸಿ ಜನರ ಬಳಿಗೆ ಹೋಗಬೇಕು ಎನ್ನುವುದು ಕಾಂಗ್ರೆಸ್ ಯೋಚನೆ. ಹಾಗಾಗಿ ಪಟ್ಟು ಸಡಿಲಿಸದೇ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ.
ಅಹೋರಾತ್ರಿ ಧರಣಿ ನಡೆಸುವ ಕುರಿತು ಘೋಷಣೆ ಮಾಡಿಯೇ ಕಲಾಪದಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತು. ಸ್ಪೀಕರ್ ಆದೇಶ ಧಿಕ್ಕರಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಆಧಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿ ಕಲಾಪದಿಂದ ಹೊರಹಾಕಿ ಎಂದು ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಸವಾಲೆಸೆದು ಸರ್ಕಾರವನ್ನು ಕೆಣಕಿದ್ದರು. ಒಂದು ವೇಳೆ ಸದನದಿಂದ ಕಾಂಗ್ರೆಸ್ ಸದಸ್ಯರನ್ನು ಹೊರಹಾಕಿದ್ದಲ್ಲಿ ಜನರ ಮುಂದೆ ಹೋಗಬಹುದು, ನಮ್ಮ ಧರಣಿಗೆ ಹೆದರಿ ನಮ್ಮನ್ನು ಕಲಾಪದಿಂದ ಹೊರಹಾಕಿದ್ದಾರೆ ಎಂದು ಅನುಕಂಪ ಗಿಟ್ಟಿಸಿಕೊಂಡು ರಾಜಕೀಯವಾಗಿ ಲಾಭ ಪಡೆದುಕೊಳ್ಳಬೇಕು ಎನ್ನುವುದು ಕಾಂಗ್ರೆಸ್ ಚಿಂತನೆಯಾಗಿತ್ತು. ಆದರೆ ಕಾಂಗ್ರೆಸ್ನ ಈ ತಂತ್ರಕ್ಕೆ ಬಿಜೆಪಿ ಸಿಲುಕದೆ ಪ್ರತಿತಂತ್ರ ಅನುಸರಿಸಿದೆ.
ಕಲಾಪದಿಂದ ಹೊರಹಾಕಿ ಎನ್ನುವ ಕಾಂಗ್ರೆಸ್ ಸವಾಲನ್ನು ತಳ್ಳಿ ಹಾಕಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ, ಕಲಾಪದಿಂದ ಸದಸ್ಯರನ್ನು ಹೊರಹಾಕುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಹೇಳುತ್ತಾ ಕಾಂಗ್ರೆಸ್ ಸದಸ್ಯರ ಮನವೊಲಿಕೆಯ ಪ್ರಯತ್ನ ಮುಂದುವರೆಸಿದ್ದಾರೆ.
ಪ್ಲಾನ್ ಎ ವಿಫಲವಾದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸುವ ಪ್ಲಾನ್ ಬಿ ಯನ್ನು ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿದೆ. ಅಹೋರಾತ್ರಿ ಧರಣಿ ನಡೆಸಿದರೆ ಶುಕ್ರವಾರವೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗುತ್ತದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು. ಆದರೆ ಇದು ಕೂಡ ಆಗಿಲ್ಲ, ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ಶುಕ್ರವಾರವೇ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಲ್ಲಿ ಸರ್ಕಾರಕ್ಕೆ ಅಧಿವೇಶನ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಕಲಾಪ ಮೊಟಕುಗೊಳಿಸಿದೆ ಎಂದು ಕಾಂಗ್ರೆಸ್ ಜನರ ಮುಂದೆ ಹೋಗುತ್ತಿತ್ತು. ಇದರಿಂದ ಕಾಂಗ್ರೆಸ್ಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗಲಿದೆ. ಇದನ್ನು ಅರಿತ ಬಿಜೆಪಿ ಕಲಾಪ ಮೊಟಕಿನಂತಹ ನಿರ್ಧಾರಕ್ಕೆ ಬಾರದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಪ್ರತಿಪಕ್ಷ ಕಾಂಗ್ರೆಸ್ ಜೊತೆ ಸಂಧಾನ ಸಭೆಗಳನ್ನು ನಡೆಸಿದೆ. ಅಹೋರಾತ್ರಿ ಧರಣಿ ವೇಳೆ ಸ್ಪೀಕರ್ ಕಾಗೇರಿ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ಸಚಿವರು ವಿಧಾನಸೌಧಕ್ಕೆ ಆಗಮಿಸಿ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದರು. ಅಲ್ಲದೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನೂ ಕರೆಸಿ ಕೈ ನಾಯಕರ ಮನವೊಲಿಕೆ ಯತ್ನ ನಡೆಸಿದ್ದಾರೆ. ಇದೆಲ್ಲವೂ ಬಿಜೆಪಿ ತಂತ್ರದ ಒಂದು ಭಾಗವೇ ಆಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಜನಪರ ವಿಚಾರಗಳ ಚರ್ಚೆಗೆ ಕಾಂಗ್ರೆಸ್ ಅಡ್ಡಿ ಮಾಡಿದೆ, ರಾಜಕೀಯವಾಗಿ ರಾಷ್ಟ್ರಧ್ವಜದ ದುರ್ಬಳಕೆ ಮಾಡುತ್ತಿದೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುವುದು ಬಿಜೆಪಿಯ ಪ್ಲ್ಯಾನ್ ಆಗಿದೆ. ಹಾಗಾಗಿಯೇ ಕಲಾಪ ಮೊಟಕು ಮಾಡುವ ಮೊದಲು ಸಾಕಷ್ಟು ಕಾಲಾವಕಾಶ ನೀಡುವುದು, ಮನವಿ ಮಾಡುವುದು, ಸಂಧಾನ ನಡೆಸುವುದು, ಮನವೊಲಿಕೆ ಯತ್ನ ನಡೆಸುವುದುದನ್ನು ಮಾಡುತ್ತಿದೆ. ಅಂತಿಮವಾಗಿ ಕಲಾಪ ಮೊಟಕುಗೊಳಿಸಿ ಕಾಂಗ್ರೆಸ್ಗೆ ರಾಜಕೀಯ ಲಾಭ ಸಿಗದಂತೆ ಮಾಡಲು ಬಿಜೆಪಿ ನಿರ್ಧರಿಸಿದೆ.
ಸದ್ಯ ಕಲಾಪವನ್ನು ಸೋಮವಾರದವರೆಗೆ ಮುಂದೂಡಿಕೆ ಮಾಡಲಾಗಿದ್ದು, ನಾಳೆಯೂ ಕಾಂಗ್ರೆಸ್ ನಾಯಕರ ಮನವೊಲಿಕೆ ಪ್ರಯತ್ನ ನಡೆಸಿ ಕಲಾಪ ನಡೆಸಲು ಯತ್ನಿಸಲಿದೆ. ಇದೇ ವೇಳೆ ಕೆಲವೊಂದು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಬೇಕಿದೆ. ಹಾಗಾಗಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ರೀತಿ ನಾಳೆ ಕೈ ನಾಯಕರ ಮನವೊಲಿಕೆ ಮತ್ತು ಬಿಲ್ಗಳನ್ನು ಪಾಸ್ ಮಾಡಿಕೊಳ್ಳುವ ಕೆಲಸ ಎರಡನ್ನೂ ಮಾಡಲು ಬಿಜೆಪಿ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಕಾರ್ಯಕಲಾಪ ಪಟ್ಟಿಯಲ್ಲೇ ನಾಲ್ಕು ಪ್ರಮುಖ ವಿಧೇಯಕಗಳನ್ನು ಸೇರಿಸಿದೆ. ಕರ್ನಾಟಕ ಸಿವಿಲ್ ಸೇವೆಗಳು, ಕರ್ನಾಟಕ ಸ್ಟಾಂಪು ತಿದ್ದುಪಡಿಯ ಎರಡು ವಿಧೇಯಕ, ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕವನ್ನು ಅಜೆಂಡಾದಲ್ಲಿ ಸೇರಿಸಿದ್ದು, ನಾಳೆ ಇವುಗಳಿಗೆ ಅಂಗೀಕಾರ ಪಡೆದುಕೊಳ್ಳಲಿದೆ.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಪ್ರತಿಷ್ಠಿಗೆ ಬಿದ್ದಿದ್ದು, ಯಾರೂ ಕೂಡ ರಾಜಿಯಾಗಲು ಮುಂದಾಗುತ್ತಿಲ್ಲ. ಯಾವ ಕಾರಣಕ್ಕೂ ಹೋರಾಟ ಕೈಬಿಡಬಾರದು ಎಂದು ಕಾಂಗ್ರೆಸ್ ನಾಯಕರು ನಿರ್ಧಾರಕ್ಕೆ ಬಂದಿದ್ದರೆ, ಈಶ್ವರಪ್ಪರಿಂದ ರಾಜೀನಾಮೆ ಪಡೆಯಬಾರದು ಎಂದು ಬಿಜೆಪಿ ನಿರ್ಧಾರಕ್ಕೆ ಬಂದಿದೆ. ಎರಡೂ ಪಕ್ಷಗಳು ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡು ಕುಳಿತಿವೆ. ಹೀಗಾಗಿ ಸದನ ನಾಳೆಯೂ ಸಹಜ ಸ್ಥಿತಿಗೆ ಬರುವುದು ಕಷ್ಟಸಾಧ್ಯವಾಗಿದೆ.
ನಾಳೆಯೂ ಸದನದಲ್ಲಿ ಈಶ್ವರಪ್ಪ ಹೇಳಿಕೆ ವಿಷಯವೇ ಪ್ರತಿಧ್ವನಿಸಲಿದ್ದು, ಸದನದ ಹೊರಗೆ ಹೋರಾಟಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದ್ದು, ಸಾಕಷ್ಟು ಅವಕಾಶ ನೀಡಿದರೂ ಸದನದಲ್ಲಿ ಚರ್ಚೆಗೆ ಬಾರದೆ ಬೀದಿಗೆ ಬಂದಿದೆ ಎಂದು ಬಿಂಬಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ಒಟ್ಟಿನಲ್ಲಿ ಈ ಬಾರಿಯ ಅಧಿವೇಶನ ಮೊಟಕುಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಕಳೆದ ಬಾರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ಭಾಷಣವನ್ನೇ ಮೊಟಕುಗೊಳ್ಳುವಂತೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯದೇ ಜಂಟಿ ಅಧಿವೇಶನ ಮೊಟಕಾಗುವಂತೆ ಮಾಡುತ್ತಿದೆ.