ಬೆಂಗಳೂರು : ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ದಾಖಲಾಗಿರುವ 56 ಪ್ರಕರಣಗಳು ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ತಕ್ಷಣವೇ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಹೈಕೋರ್ಟ್, ತನ್ನ ರಿಜಿಸ್ಟ್ರಿಗೆ ಆದೇಶಿಸಿದೆ.
ಯುಎಪಿಎ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಸ್ಥಾಪನೆಗೆ ಆದೇಶಿಸಬೇಕೆಂದು ಕೋರಿ ನಗರದ ವಕೀಲ ಎ.ವಸಿಮುದ್ದೀನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಾಲಯದ ಹಿಂದಿನ ಆದೇದಂತೆ ರಿಜಿಸ್ಟ್ರಾರ್ ಜನರಲ್ ವರದಿ ಸಲ್ಲಿಸಿದ್ದರು. ವರದಿಯಲ್ಲಿ, ಯುಎಪಿಎ ಕಾಯ್ದೆ -1967 ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ನಾಲ್ಕು ಕೋರ್ಟ್ ರಚಿಸಲಾಗಿದೆ. ಇವುಗಳಲ್ಲಿ ಸದ್ಯ 2 ಕೋರ್ಟ್ ಖಾಲಿ ಉಳಿದಿವೆ. ಆ ಎರಡು ಕೋರ್ಟ್‌ಗಳ ಕೇಸುಗಳನ್ನು ಉಳಿದೆರಡು ಕೋರ್ಟುಗಳ ನ್ಯಾಯಾಧೀಶರಿಗೆ ನಿಯೋಜಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೇ ಒಟ್ಟು 56 ಯುಎಪಿಎ ಪ್ರಕರಣಗಳಿವೆ ಎಂದು ತಿಳಿಸಲಾಗಿತ್ತು.
ರಿಜಿಸ್ಟ್ರಿಯ ವರದಿ ಪರಿಶೀಲಿಸಿದ ಪೀಠ, ಖಾಲಿ ಇರುವ ಕೋರ್ಟ್ಗಳಿಗೆ ತಕ್ಷಣವೇ ನ್ಯಾಯಾಧೀಶರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರು ಯುಎಪಿಎ ಕಾಯ್ದೆ ಅಡಿ ಹೆಚ್ಚಿನ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಆರೋಪಪಟ್ಟಿಗಳನ್ನು ಸಲ್ಲಿಸುತ್ತಿದೆ. ಆದರೆ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಆರೋಪಿಗಳು ಜೈಲಿನಲ್ಲಿಯೇ ಕೊಳೆಯುಂತವಾಗಿದೆ. ಆದ್ದರಿಂದ ಈ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿಯಾಗಿ ಒಂದು ಕೋರ್ಟ್ ಸ್ಥಾಪನೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.