ಬೆಂಗಳೂರು: ರಾಜ್ಯದಲ್ಲಿಂದು 1,26,386 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 664 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,77,889 ಏರಿಕೆ ಆಗಿದೆ.
ಇತ್ತ 711 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 29,27,740 ಗುಣಮುಖರಾಗಿದ್ದಾರೆ. 8 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 37,819ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 12,301 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.52% ರಷ್ಟಿದ್ದರೆ ಸಾವಿನ ಪ್ರಮಾಣ 1.20% ರಷ್ಟಿದೆ.
ಮೂರನೇ ಅಲೆ ಭೀತಿ ಕಡಿಮೆ: ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಮೂರನೇ ಅಲೆ ಭೀತಿ ಇರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಆದರೆ ಸದ್ಯದ ಹೊಸ ಸೋಂಕಿತರ ಸಂಖ್ಯೆ ನೋಡ್ತಾ ಹೋದರೆ ಕೊರೊನಾ ಮೂರನೇ ಅಲೆ ಸದ್ಯಕ್ಕೆ ಬರೋದಿಲ್ಲ. ಒಂದು ವೇಳೆ ಬಂದರೂ ಹೆಚ್ಚಿನ ಪರಿಣಾಮ ಬೀರೋದಿಲ್ಲ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೇರಳದಲ್ಲಿ 30 ಸಾವಿರ ಕೇಸಿದ್ದರೂ ಗಡಿಭಾಗದಲ್ಲಿ ತುಸು ಪರಿಣಾಮ ಬೀರಿದೆ. ರಾಜ್ಯದಲ್ಲಿ ಇದರ ಪರಿಣಾಮ ಬೀರಿರುವುದು ತುಂಬ ಕಡಿಮೆ ಹಾಗೂ ಕೊರೊನಾ ಮ್ಯೂಟೆಂಟ್ ಬದಲಾವಣೆಯಾಗದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ.
ರಾಮಬಾಣವಾದ ಲಸಿಕೆ, ಎಚ್ಚರ ತಪ್ಪಿದ್ರೆ ಅಪಾಯ: ಎರಡನೇ ಅಲೆಯ ಅಬ್ಬರದ ವೇಳೆ ಲಸಿಕೆ ಇರಲಿಲ್ಲ. ಆದರೆ ಇದೀಗ ಕೊರೊನಾ ಲಸಿಕೆ ಹೆಚ್ಚಳದಲ್ಲಿ ಪ್ರಗತಿ ಕಂಡಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಫಲಕಾರಿಯಾಗುತ್ತಿದೆ. ಇದರಿಂದ ಕೋವಿಡ್ 3ನೇ ಅಲೆ ಇನ್ನೂ ತಡವಾಗಬಹುದು. ಆದರೆ ಯಾವಾಗ ಬರುತ್ತೆ ಎಂದು ಹೇಳಲು ಆಗದು. ಬಂದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತುಂಬ ಕಡಿಮೆ ಇರಲಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರನೇ ಅಲೆ ಪರಿಣಾಮ ಬೀರುವುದಿಲ್ಲ ಅಂತ ಹಬ್ಬಗಳಲ್ಲಿ ಎಚ್ಚರ ತಪ್ಪಿದರೆ ಆಪತ್ತು ಖಂಡಿತ ಕಾಡಲಿದೆ. ಮಹಾಲಯ ಅಮವಾಸ್ಯೆ, ದಸರಾ ಹಬ್ಬವೆಂದು ಕೊರೊನಾ ಮಾರ್ಗಸೂಚಿ ಮರೆತರೆ, ಸಂಕಷ್ಟ ಎದುರಾಗಲಿದೆ. ಆದರೆ ಕಳೆದ ಗೌರಿ- ಗಣೇಶ ಹಬ್ಬದ ನಂತರ ಕೊರೊನಾ ಕೇಸ್ ಏರಿಕೆಯಾಗಿಲ್ಲ ಹೀಗಾಗಿ, ಮೂರನೇ ಅಲೆ ಹೆಚ್ಚು ಪರಿಣಾಮಕಾರಿ ಇರುವುದಿಲ್ಲ ಅಂತ ಹೇಳಲಾಗ್ತಿದೆ.
ಮಕ್ಕಳ ಒಡನಾಟ ಇರುವವರಿಗೆ ಆದ್ಯತೆ ಮೇರೆಗೆ ಲಸಿಕೆ ಅಗತ್ಯ: ಮಕ್ಕಳಿಗೆ ಕೊರೊನಾ ಬರೋದು ತುಂಬ ಕಡಿಮೆ. ಒಂದು ವೇಳೆ ಬಂದ್ರೂ ಹೆಚ್ಚಿನ ಪರಿಣಾಮ ಬೀರದು. ಆದರೆ ಮಕ್ಕಳ ಜೊತೆಗಿರುವವರಿಗೆಲ್ಲ ಲಸಿಕೆಯನ್ನ ಆದ್ಯತೆ ಮೇರೆಗೆ ನೀಡಬೇಕು ಅಂತ ಮನವಿ ಮಾಡಿದ್ದಾರೆ.